ಕನ್ನಡ ವಾರ್ತೆಗಳು

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ: ಸಲಕರಣೆಗಳು ವಶ, ಶೆಡ್‌ಗಳ ನೆಲಸಮ

Pinterest LinkedIn Tumblr

ಕುಂದಾಪುರ: ಆ ಊರಿನ ರಸ್ತೆಗಳು ಹೊಂಡಗುಂಡಿ ಮಯವಾಗಿದೆಬಿಟ್ಟಿದೆ, ಯಾವ ಸಮಯ ನೋಡಿದರೂ ಲಾರಿಗಳ ಸಂಚಾರ. ಹೊಳೆ ಸಮೀಪದಲ್ಲಿ ಅಕ್ರಮ ಮರಳು ತೆಗೆದು ಸಾಗಿಸುವ ಧಣಿಗಳು. ಅವರ ಬಳಿ ಲೈಸೆನ್ಸ್ ಇದೆಯೋ ಇಲ್ಲವೋ ಕೇಳೋರು ಇಲ್ಲ, ಕೇಳಿದವರು ಇಲ್ಲ. ಇಲ್ಲಿನ ಅವ್ಯವಸ್ಥೆಯನ್ನು ಕಾಣದಂತೆ ಜಾಣಕುರುಡು ಪ್ರದರ್ಶಿಸುವ ಸ್ಥಳೀಯ ಪಂಚಾಯತ್. ಇಷ್ಟೇಲ್ಲದರ ನಡುವೆ ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳು ಇಲ್ಲಿಗೆ ದಾಳಿ ನಡೆಸಿಯೇ ಬಿಟ್ಟರು. ಆಮೇಲೆ ಏನಾಯ್ತು ಗೊತ್ತಾ…

ಕುಂದಾಪುರ ತಾಲೂಕಿನ ಕಂಡ್ಲೂರು ಜುಲ್ಲಾ ಮಸೀದಿ ರಸ್ತೆಯ ಕೊನೆಯ ಹೊಳೆ ಭಾಗದಲ್ಲಿ ಬಹು ಕಾಲಗಳಿಂದ ನಡೆಯುತ್ತಿರುವ ಈ ಮರಳು ದಂಧೆಯಿಂದ ಅದೆಷ್ಟೋ ಮಂದಿ ನಲುಗಿದವರಿದ್ದಾರೆ. ಇಲ್ಲಿನ ಸಂಪರ್ಕ ರಸ್ತೆಗಳು ಇದ್ದು ಇಲ್ಲದಂತಾಗಿದೆ. ನಿತ್ಯ ಲಾರಿಗಳ ಓಡಾಟ, ಅವುಗಳ ಕರ್ಕಷ ಹಾರ್ನ್ ಸದ್ದಿನಲ್ಲಿಯೇ ಇಲ್ಲಿನ ಜನರು ಹಿಡಿಶಾಪ ಹಾಕುತ್ತಾ ಬದುಕುತ್ತಿದ್ದಾರೆ. ಈ ಅಕ್ರಮ ಮರಳುಗಾರಿಕೆ ಬಗ್ಗೆ ಹಲವು ಪ್ರಜ್ನಾವಂತರು ಸಂಬಂದಪಟ್ಟ ಇಲಾಖೆಗೆ ದೂರು ನೀಡಿದ್ದರೂ ಕೂಡ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಇಲ್ಲಿಗೆ ಅಧಿಕಾರಿಗಳೇ ಬರುತ್ತಿರಲಿಲ್ಲ, ಸ್ಥಳೀಯ ಪಂಚಾಯತ್ ಅಂತೂ ಇತ್ತ ತಲೆಹಾಕಿಯೂ ಮಲಗುತ್ತಿರಲಿಲ್ಲ.

Kndpr_Illeagle_Sand Mining (17) Kndpr_Illeagle_Sand Mining (16) Kndpr_Illeagle_Sand Mining (1) Kndpr_Illeagle_Sand Mining (9) Kndpr_Illeagle_Sand Mining (4) Kndpr_Illeagle_Sand Mining (5) Kndpr_Illeagle_Sand Mining (11) Kndpr_Illeagle_Sand Mining (14) Kndpr_Illeagle_Sand Mining (6) Kndpr_Illeagle_Sand Mining (15) Kndpr_Illeagle_Sand Mining (18) Kndpr_Illeagle_Sand Mining (19) Kndpr_Illeagle_Sand Mining (12) Kndpr_Illeagle_Sand Mining (13) Kndpr_Illeagle_Sand Mining (2) Kndpr_Illeagle_Sand Mining (3) Kndpr_Illeagle_Sand Mining (7) Kndpr_Illeagle_Sand Mining (8) Kndpr_Illeagle_Sand Mining (10)

ಆದರೇ ಇತ್ತೀಚೆಗೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯಾಗಿ ಬಂದಿರುವ ಡಾ. ಮಹಾದೇಶ್ವರ್ ಅವರು ಶತಾಯಗತಾಯ ತಾಲೂಕಿನಲ್ಲಿರುವ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಪಣತೊಟ್ಟಿದ್ದಾರೆ. ಕಳೆದ ಜನವರಿಯಲ್ಲಿ ಈ ಭಾಗದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿ, ಲಾರಿಗಳನ್ನು ವಶಪಡಿಸಿಕೊಂಡಿದ್ದಲ್ಲದೇ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐ‌ಆರ್ ದಾಖಲಿಸಿದ್ದು ಮುಂದೆ ಅಕ್ರಮ ಮರಳುಗಾರಿಕೆ ನಡೆಸದಂತೆ ಖಡಕ್ ವಾರ್ನ್ ಮಾಡಿದ್ದರು. ಆದರೂ ಇದ್ದನ್ನೆಲ್ಲಾ ಕೇರ್ ಮಾಡದ ಗಣಿ ಮಾಲೀಕರು ಆದೇಶಗಳು ನಮಗಲ್ಲ ಎನ್ನುವಂತೇ ಯಾವುದೇ ಪರವಾನಿಗೆ ಇಲ್ಲದೇಯೂ ಕೂಡ ರಾಜಾರೋಷವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದರು. ಸ್ಥಳೀಯರು ಈ ಬಗ್ಗೆ ಪುನಃ ಅಧಿಕಾರಿಗಳ ಗಮನಕ್ಕೆ ತಂದಾಗ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮಹಾದೇಶ್ವರ್ ಅವರು ಕುಂದಾಪುರ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ನೇತೃತ್ವದಲ್ಲಿ ದಾಳಿ ನಡೆಸಿದ್ರು.

ಶುಕ್ರವಾರ ಮಧ್ಯಾಹ್ನ ನಡೇದ ದಾಳಿ ಸಂದರ್ಭ ಎಚ್ಚರಿಕೆಯನ್ನೂ ಗಾಳಿಗೆ ತೂರಿ ಪುನಃ ಮರಳುಗಾರಿಕೆ ನಡೇಸುತ್ತಿರುವ ಗಣಿ ಮಾಲೀಕರಿಗೆ ಅಧಿಕಾರಿಗಳು ಮಾತಿನಲ್ಲಿಯೇ ಬಿಸಿಮುಟ್ಟಿಸಿದರು. ಅಲ್ಲದೇ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಸಲಕರಣೆಗಳನ್ನು ಮತ್ತು ಹೊಳೆಯ ದಡದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಇಪ್ಪತ್ತೈದಕ್ಕೂ ಅಧಿಕ ಶೆಡ್‌ಗಳನ್ನು ಜೆಸಿಬಿಯಲ್ಲಿ ತೆರವುಗೊಳಿಸಿದರು. ಸುಮಾರು ಹದಿನೈದಕ್ಕೂ ಅಧಿಕ ಮಂದಿ ಈ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿದ್ದಾರೆ. ಇಂತಹ ಅಕ್ರಮ ತಡೆಯಲು ನಾವು ಬದ್ಧರಾಗಿದ್ದೇವೆ. ಇನ್ನೂ ಇಂತಹಾ ಅಕ್ರಮ ಮರಳುಗಾರಿಕೆ ಮುಂದುವರಿಸಿದರೆ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಂತೆ ಕಠಿಣ ಕ್ರಮ ಜರುಗಿಸುತ್ತೇವೆ ಅಂತಾರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಡಾ. ಮಹಾದೇಶ್ವರ್.

ಇನ್ನು ಇದೇ ಸಂದರ್ಭ ತಾಲೂಕಿನ ಹಳ್ನಾಡು, ಗುಲ್ವಾಡಿ, ಕಂಡ್ಲೂರು, ಅಂಪಾರು, ಕಾವ್ರಾಡಿ, ಬಸ್ರೂರಿನಲ್ಲೂ ದಾಳಿ ನಡೆಸಿದ ಅಧಿಕಾರಿಗಳು ಗಣಿ ಮಾಲೀಕರಿಗೆ ಬಿಸಿಮುಟ್ಟಿಸಿದರು. ದಾಳಿ ಸಂದರ್ಭ ಕುಂದಾಪುರ ಠಾಣೆಯ ಎಸ್‌ಐ ನಾಸೀರ್ ಹಾಗೂ ಕುಂದಾಪುರ ಠಾಣೆಯ ಹಲವು ಸಿಬಂದಿಗಳಿದ್ದರು. ಡಿ‌ಎ‌ಆರ್ ಪೊಲೀಸ್, ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸ್ಥಳದಲ್ಲಿದ್ದರು.

ಒಟ್ಟಿನಲ್ಲಿ ಕುಂದಾಪುರ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಈ ಅಕ್ರಮ ಮರಳುಗಾರಿಕೆಗೆ ಇನ್ನಾದರೂ ಸಂಪೂರ್ಣ ಅಂಕುಷ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment