ಮಂಗಳೂರು,ಫೆ.24: ಪಡೀಲಿನಲ್ಲಿ ಪ್ರಸ್ತಾವಿಸಲಾಗಿರುವ ಜಿಲ್ಲಾ ಕಚೇರಿ ಕಾಂಪ್ಲೆಕ್ಸ್ ಪ್ರದೇಶದಲ್ಲಿರುವ 386 ಮರಗಳ ಭವಿಷ್ಯ ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಡೀಮ್ಡ್ ಅರಣ್ಯ ಸಮಿತಿಗಳ ಅಭಿಪ್ರಾಯ ಅವಲಂಭಿಸಿದೆ.
ಚೆನ್ನೈಯ ರಾಷ್ಟ್ರೀಯ ಹಸಿರು ಪ್ರಾಧಿಕರಣದ ನಿರ್ದೇಶನದಂತೆ ಈ ಸಮಿತಿ ಸದಸ್ಯರು ಪಡೀಲಿನಲ್ಲಿರುವ ಜಾಗದ ಸಮೀಕ್ಷೆ ನಡೆಸಿದ್ದಾರೆ. ಇಲ್ಲಿನಮರಗಳನ್ನು ಕಡಿದು ಹಾಕುವುದಕ್ಕೆ ವಕೀಲೆ ಸುಮಾ ನಾಯಕ್ ಆಕ್ಷೇಪಿಸಿ, ಪ್ರಾಧಿಕರಣಕ್ಕೆ ಮನವಿ ಮಾಡಿದ್ದರು. ಜಿಲ್ಲಾಡಳಿತ ಇಲ್ಲಿನ 5.89 ಎಕ್ರೆ ಜಾಗ ಜಿಲ್ಲಾಡಳಿತ ಕಚೇರಿ ನಿರ್ಮಿಸಲು ಪ್ರಸ್ತಾವಿಸಿದೆ. ಇದರಲ್ಲಿ ಸಾಕಷ್ಟು ಮರಗಳು ಮತ್ತು ಅಪೂರ್ವ ಜೀವರಾಶಿಗಳಿವೆ ಎಂದು ನಾಯಕ್ ಆಕ್ಷೇಪಿಸಿದ್ದಾರೆ.
ಕಟ್ಟಡ ನಿರ್ಮಿಸಲು ಪ್ರಸ್ತಾವಿಸಲಾಗಿರುವ ಭೂಪ್ರದೇಶ ಡೀಮ್ಡ್ ಅರಣ್ಯವೇ ಎಂಬುದನ್ನು ಮೊದಲು ಗುರುತಿಸಿಕೊಳ್ಳಿ ಎಂದು ಎನ್‌ಜಿಟಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಡಿ. ಸಿ ಎ.ಬಿ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯೊಂದು ನಡೆಯಿತು. ಇದರಲ್ಲಿ ಅರಣ್ಯಗಳ ಉಪ-ಸಂರಕ್ಷಣಾಧಿಕಾರಿ ಹನುಮಂತಪ್ಪ ಹಾಗೂ ಸುಮಾ ನಾಯಕ್ ಭಾಗವಹಿಸಿದ್ದರು.
೨೦೦೨ರಲ್ಲಿ ಅರಣ್ಯ ಇಲಾಖೆ ಬಿಡುಗಡೆಗೊಳಿಸಿರುವ ಡೀಮ್ಡ್ ಅರಣ್ಯದಲ್ಲಿ ಸೇರಿಕೊಂಡಿಲ್ಲ. ಅಲ್ಲದೆ ಇದು ಇದುವರೆಗೂ ಅರಣ್ಯ ಪ್ರದೇಶವಾಗಿ ನೋಟಿಫೈ ಆಗಿಲ್ಲ ಎಂದು ಡೀಸಿ ತಿಳಿಸಿದರು. ಇದು ನೈಸರ್ಗಿಕ ಅರಣ್ಯ ಸ್ವರೂಪ ಹೊಂದಿಲ್ಲ ಎಂದು ಅರಣ್ಯಾಧಿಕಾರಿ ಹನುಮಂತಪ್ಪನವರೂ ಅಭಿಪ್ರಾಯಪಟ್ಟಿದ್ದಾರೆ.


