ಮಂಗಳೂರು,ಫೆ.22: ಪುಳಿಂಚ ಸೇವಾ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಬಂಟ್ವಾಳ ಬಾಳ್ತಿಲ ಗ್ರಾಮದ ಶ್ರೀ ಕಾರಣೀಕದ ಕಲ್ಲುರ್ಟಿ ದೈವಸ್ಥಾನದಲ್ಲಿನ ಬಯಲು ರಂಗ ಮಂಟಪದಲ್ಲಿ ನಡೆದ “ಪುಳಿಂಚ ಪ್ರಶಸ್ತಿ ಹಾಗೂ ಪುಳಿಂಚ ಸೇವಾ ರತ್ನ ಪುರಸ್ಕಾರ ಪ್ರದಾನ’ ಕಾರ್ಯಕ್ರಮದಲ್ಲಿ ಯಕ್ಷಗಾನ ಸಾಧಕರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಯಕ್ಷಗಾನದ ಮೂಲಕ ಕರಾವಳಿಯ ಶ್ರೀಮಂತಿಕೆ ಜಗದಗಲ ವಿಸ್ತಾರ ಪಡೆದುಕೊಂಡಿದ್ದು, ಇದರಲ್ಲಿ ನೂರಾರು ಯಕ್ಷಸಾಧಕರ ಪರಿಶ್ರಮವಿದೆ. ಈ ನಿಟ್ಟಿನಲ್ಲಿ ಯಕ್ಷಗಾನದ ಮೇರು ಕಲಾವಿದ ದಿ. ಪುಳಿಂಚ ರಾಮಯ್ಯ ಶೆಟ್ಟಿ ಯಕ್ಷಗಾನಕ್ಕೆ ನೀಡಿದ ಸೇವೆ ಸ್ಮರಣೀಯ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು.
“ಪುಳಿಂಚ ಸಂಸ್ಮರಣಾ ಗ್ರಂಥ’ ಅನಾವರಣಗೊಳಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಪುಳಿಂಚ ರಾಮಯ್ಯ ಶೆಟ್ಟಿ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಯಶಸ್ವಿಯಾದರು. ಪ್ರಸಕ್ತ ಅವರ ನೆನಪಿನಲ್ಲಿ ಯಕ್ಷಗಾನ ಸಾಧಕರನ್ನು ಗುರುತಿಸಿ ಸಮ್ಮಾನಿಸುವ ನಿಟ್ಟಿನಲ್ಲಿ ಅವರ ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ನಡೆಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.ಯಕ್ಷಗಾನದ ಹಿರಿಯ ಸಾಧಕರಾದ ಮಿಜಾರು ಅಣ್ಣಪ್ಪ, ಡಾ. ಕೋಳ್ಯೂರು ರಾಮಚಂದ್ರ ರಾವ್, ಕುಂಬ್ಳೆ ಸುಂದರ್ ರಾವ್, ಕೆ.ಎಚ್. ದಾಸಪ್ಪ ರೈ, ಅನಂತರಾಮ ಬಂಗಾಡಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ಪುಳಿಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಎಎಸ್‌ಐ ಕೇಪು ಗೌಡ, ದೈವ ನರ್ತಕ ಪದ್ಮ ಪಂಬದ ಅವರಿಗೆ ಪುಳಿಂಚ ಸೇವಾ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು.
ಶ್ರೀ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ ದೀಪ ಪ್ರಜ್ವಲನ ನಡೆಸಿದರು. ಆರ್‌ಎಸ್‌ಎಸ್ ಪ್ರಮುಖ ಪ್ರಕಾಶ್ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ ಅವರು “ಪುಳಿಂಚ’ ಸ್ಮತಿ-ಕೃತಿ ಗ್ರಂಥ ಪರಿಚಯ ಮಾಡಿದರು. ಶಾಸಕಿ ಶಕುಂತಳಾ ಶೆಟ್ಟಿ, ವಿ. ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.