ಮಂಗಳೂರು, ಫೆ.21: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲಿನಲ್ಲಿ ಕಂಬಿಗಳನ್ನೆಣಿಸುತ್ತಿರುವ ಕಟೀಲು ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಸಹಾಯಕ ಅರ್ಚಕ ಅಪ್ಪು ಭಟ್‌ನ ಆಪ್ತಸ್ನೇಹಿತನ ಶವ ನಿನ್ನೆ ಸಂಜೆ ಬಜ್ಪೆ ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪದ ಕುಮೇರು ಎಂಬಲ್ಲಿ ಗುಡ್ಡೆ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಪ್ಪದ ಕುಮೇಲು ನಿವಾಸಿ ಶೇಖರ ಪೂಜಾರಿ (46) ಮೃತ ವ್ಯಕ್ತಿಯಾಗಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಊಟೋಪಚಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅತ್ಯಾಚಾರ ಆರೋಪಿ ಅಪ್ಪು ಭಟ್‌ನ ಆಪ್ತಸ್ನೇಹಿತನಾಗಿದ್ದ ಈತ ಫೆ.೧೫ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಮನೆಮಂದಿ ಫೆ.೧೫ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಿನ್ನೆ ಸಂಜೆ ಶೇಖರ ಪೂಜಾರಿಯವರ ಮನೆ ಸಮೀಪದ ಮಹಿಳೆಯೋರ್ವರು ದನವನ್ನು ಹುಡುಕಿಕೊಂಡು ಹೋಗಿದ್ದಾಗ ಗುಡ್ಡೆ ಪ್ರದೇಶದಲ್ಲಿ ಶೇಖರ ಪೂಜಾರಿಯ ಮೃತದೇಹವನ್ನು ಕಂಡು ಮನೆಯವರಿಗೆ ಮಾಹಿತಿ ನೀಡಿದ್ದರು. ಶವದ ಬಳಿ ವಿಷದ ಬಾಟ್ಲಿ ಪತ್ತೆಯಾಗಿದ್ದು ಶೇಖರ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಅಪ್ಪು ಭಟ್‌ನ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಸಂತ್ರಸ್ತ ಬಾಲಕಿಯ ಮನೆಯವರೋಂದಿಗೆ ಹಣದ ವ್ಯವಹಾರದ ಮಧ್ಯಸ್ಥಿಕೆಯನ್ನು ಶೇಖರ ಪೂಜಾರಿ ವಹಿಸಿಕೊಂಡಿದ್ದರೆನ್ನಲಾಗಿದೆ. ಇದಕ್ಕಾಗಿ ಪೊಲೀಸಿನವರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದರಿಂದ ಆತಂಕಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ಬಜ್ಪೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
