ಉಡುಪಿ: ಜಿಲ್ಲೆಯಲ್ಲಿ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ರವರು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಉದ್ಘಾಟಿಸಿದರು.
ಎರನೇ ಸುತ್ತಿನಲ್ಲಿ ಜಿಲ್ಲೆಯಲ್ಲಿ ಪೋಲಿಯೋ ಲಸಿಕೆ ನೀಡಲು 0-5 ವರ್ಷದೊಳಗಿನ 87776 ಮಕ್ಕಳನ್ನು ಗುರುತಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 644 ಲಸಿಕಾ ಕೇಂದ್ರ ತೆರೆದು , ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು. ಮೊದಲನೇ ಸುತ್ತಿನಲ್ಲಿ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿದ್ದು, ಎರಡನೇ ಹಂತದಲ್ಲಿ ಸಹ ಯಶಸ್ವಿಯಾಗಿ ಮುಗಿಸುವಂತೆ ಸೂಚಿಸಿದ ಸಚಿವರು , ಪೋಲಿಯೋ ಕಾರ್ಯಕ್ರಮಕ್ಕೆ ರೋಟರಿ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ನೀಡುತ್ತಿರುವ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಗ್ರೇಸಿ ಗೋನ್ವಾಲ್ವಿಸ್, ಜಿಲ್ಲಾ ಸರ್ಜನ್ ಮಹೇಂದ್ರ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯ ಡಾ. ಕಿಶೋರಿ , ಮಕ್ಕಳ ತಜ್ಞ ಡಾ. ಅಮರನಾಥ ಶಾಸ್ತ್ರಿ, ರೋಟರಿಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಡಿಹೆಚ್‌ಓ ಡಾ. ರೋಹಿಣಿ ಸ್ವಾಗತಿಸಿದರು . ರೋಟರಿ ಅಧ್ಯಕ್ಷ ಡಾ.ಪ್ರಭಾಕರ ಮಲ್ಯ ವಂದಿಸಿದರು.