ಉಡುಪಿ: ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅಲ್ಲಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ದು ಹಾಗೂ ಕೆಲವೆಡೆ ಮತಯಂತ್ರ ಕೈಕೊಟ್ಟಿದ್ದು ಹೊರತುಪಡಿಸಿದರೇ ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನದಲ್ಲಿ 10 ಗಂಟೆಯ ವೇಳೆಗೆ ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆತ್ರಾಡಿಯಲ್ಲಿ 70 ವರ್ಷದ ಮುಟ್ಟಿ ಶೆಟ್ಟಿಗಾರ್ತಿ ತಮ್ಮ ಮಗನ ಸಹಾಯದಿಂದ ಮತ್ತು 90 ವರ್ಷದ ಮೊಹಮದ್ ಬ್ಯಾರಿ ತಮ್ಮ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದರು. ಈ ಕೇಂದ್ರದಲ್ಲಿ ಬೆಳಗ್ಗೆ 9 ರ ವೇಳೆಗೆ 1230 ಮತದಾರರಲ್ಲಿ 176 ಮಂದಿ ಮತ ಚಲಾಯಿದ್ದರು.
ಹಿರಿಯಡ್ಕದಲ್ಲಿ ಸಹ ಮತದಾರರು ಉತ್ಸಾಹದಿಂದ ಮತದಾನ ಪಾಲ್ಗೊಂಡಿದ್ದು, 82 ವರ್ಷದ ಸುಶೀಲ ತಮ್ಮ ಮೊಮ್ಮಗಳ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದರು.
ಬ್ರಹ್ಮಾವರ ವಲಯದ ಬಣ್ಣಂಪಳ್ಳಿ ಶಾಲೆಯಲ್ಲಿ 90 ವರ್ಷದ ಪದ್ಮಾವತಿ ಮತ ಚಲಾಯಿಸಿದ್ದು, ಈ ಮತಗಟ್ಟೆಯನ್ನ್ಲುಅತ್ಯಂತ ಸೂಕ್ಷ್ಮ ಎಂದು ಗುರುತಿಸಿದ್ದರಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತಿತ್ತು.
ನಕ್ಸಲ್ ಪೀಡಿತ ಮುಟ್ಲುಪಾಡಿ ಯಲ್ಲಿ ಮತಗಟ್ಟೆಗೆ ಶಸ್ತ್ರದಾರಿ ಪೊಲೀಸರಿಂದ ಸೂಕ್ತ ಭದ್ರತೆ ಏರ್ಪಡಿಸಲಾಗಿದ್ದು, ಈ ಮತಗಟ್ಟೆಯಲ್ಲಿನ 559 ಮತದಾರರಲ್ಲಿ ಬೆಳಗ್ಗೆ 11.30 ರ ವೇಳೆಗೆ 172 ಮಂದಿ ಮತ ಚಲಾಯಿಸಿದ್ದರು.
ಬೇಳಂಜೆಯ ದೂಪದಕಟ್ಟೆ ಶಾಲೆಯ ಮತಗಟ್ಟೆಯಲ್ಲಿ 1 ಗಂಟೆಯ ವೇಳೆಗೆ ಶೇ. 55 ರಷ್ಟು ಮತದಾನ ನಡೆದಿತ್ತು.