ಕುಂದಾಪುರ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಪಕ್ಷದ ಬಗ್ಗೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅತ್ಯಧಿಕ ಮತಗಳೊಂದಿಗೆ ಜಯಗಳಿಸಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಕಳೆದ ಲೋಕಸಭಾ ಚುನಾವಣೆ ಹಾಗೂ ಗ್ರಾಮಸಭೆ ಚುನಾವಣೆಯಲ್ಲಿ ತಟಸ್ಥರಾಗಿದ್ದು ಈ ಬಾರಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ.
ಹೌದು.. ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ, ಪಕ್ಷೇತರನಾಗಿರುವೆ ಎಂದಿದ್ದ ಹಾಲಾಡಿಯವರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡಕ್ಕೆ ಬೆಲೆಕೊಟ್ಟು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ಭರ್ಜರಿ ಮತಪ್ರಚಾರಕ್ಕೆ ತೊಡಗಿದ್ದಾರೆ. ಮೂರ್ನಾಲ್ಕು ದಿನಗಳಿಂದ ಕೋಟ, ಕೋಟೇಶ್ವರ, ಬೀಜಾಡಿ, ಹಾಲಾಡಿ ಹಾಗೂ ಮಂದರ್ತಿ ಜಿಲ್ಲಾಪಂಚಾಯತ್ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮತದಾರರನ್ನು ಭೇಟಿ ಮಾಡಿ ಬಿಜೆಪಿ ಪಕ್ಷದ‘ಕಮಲ’ ಗುರುತಿಗೆ ಮತ ಹಾಕುವಂತೆ ಮನವಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಭಾವಚಿತ್ರವಿರುವ ಮನವಿ ಪತ್ರದಲ್ಲಿ ಮತದಾರರರಲ್ಲಿ ಬಿಜೆಪಿ ಗುರುತಿಗೆ ಮತಹಾಕಿ ಕ್ಷೇತ್ರದ ಅಭಿವ್ರದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದ್ದಾರೆ.
‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಅವರು, ಕುಂದಾಪುರದ ೫ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮತದಾರರು ನನ್ನನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ, ಈ ಬಾರಿ ಕ್ಷೇತ್ರದ ಅಭಿವ್ರದ್ಧಿಯ ನಿಟ್ಟಿನಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಹರಸಲಿದ್ದಾರೆ. ಸದ್ಯ ಬಿಜೆಪಿಗೆ ಬರುವುದಿಲ್ಲ, ಈ ಅವಧಿಯಲ್ಲಿ ಪಕ್ಷೇತರನಾಗಿಯೇ ಇರುವೆ ಎಂದರು.