ಕುಂದಾಪುರ: ಬಿಗ್ ಬಾಸ್ ಒಂದು ಉತ್ತಮ ಅನುಭವ. ಸಮಾಜದಲ್ಲಿಒಳಿತು ಕೆಡುಕುಗಳಿರುವ ಹಾಗೇ ಬಿಗ್ ಬಾಸ್ ಮನೆಯೊಳಗೂ ಎಲ್ಲವೂ ಇದೆ. ಸಿಹಿ-ಕಹಿ ಎರಡು ಅನುಭವಗಳಾಗಿದೆ. ಜೀವನ ಪಾಠ ಕಲಿಯಲು ನನಗೆ ಬಿಗ್ ಬಾಸ್ ಉತ್ತಮ ವೇದಿಕೆಯಾಗಿದೆ ಎಂದು ಮಳೆಹುಡುಗಿ(ಮುಂಗಾರು ಮಳೆ ಖ್ಯಾತಿಯ) ಪೂಜಾಗಾಂಧಿ ತಮ್ಮ ಮನದಾಳದ ಮಾತನ್ನು ‘ಕನ್ನಡಿಗ ವರ್ಲ್ಡ್’ ಜೊತೆ ಹಂಚಿಕೊಂಡರು.
ಕುಂದಾಪುರದ ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದಲ್ಲಿ ಹಾಲುಹಬ್ಬ ಕೆಂಡಸೇವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಇವರು ‘ಕನ್ನಡಿಗ ವರ್ಲ್ಡ್’ ಪ್ರತಿನಿಧಿ ಜೊತೆ ಮಾತಿಗೆ ಸಿಕ್ಕರು.
ಕ.ವ.: ಬಿಗ್ ಬಾಸ್ ಹೆಸರು ತಂದು ಕೊಟ್ಟಿದ್ಯಾ?
ಪೂಜಾ: ನಾನೊಬ್ಬ ಸಾಮಾನ್ಯ ಹುಡುಗಿಯಾಗಿ ಬಿಗ್ ಬಾಸ್ ಮನೆಗೆ ಹೋದೆ. ಅಲದೊಂದು ರಿಯಾಲಿಟಿ ಶೋ ಆಗಿದ್ದರಿಂದ ಅಲ್ಲಿ ಮುಖವಾಡ ಜೀವನ ಮಾಡುವುದು ನನಗೆ ಸಾಧ್ಯವಾಗಿಲ್ಲ. ಜನರ ಹಾರೈಕೆಗೆ ತಲೆಬಾಗುವೆ.
ಬಿಗ್ ಬಾಸ್ ಮನೆಯಲ್ಲಿ ಕಲಿತ ಪಾಠವೇನು?
ಬಿಗ್ ಬಾಸ್ ಒಂದು ಉತ್ತಮ ವೇದಿಕೆ. ನೂರು ದಿನಗಳ ಕಾಲ ಹದಿನೈದು ಮಂದಿಯೊಂದಿಗೆ ಸ್ಪರ್ಧಾತ್ಮಕವಾಗಿ ಕಳೆಯಬೇಕಿದೆ. ಜೀವನದಲ್ಲಿ ಕುಟುಂಬಕ್ಕೆ ನೀಡಬೇಕಿರುವ ಪ್ರಾಮುಖ್ಯತೆ ಹಾಗೂ ಗೌರವದ ಬಗ್ಗೆ ಅತಿಯಾಗಿ ತಿಳಿಯಿತು. ನಾಟಕಕ್ಕೆ ಜಾಗವಿಲ್ಲ ನೇರವಾಗಿ ಮಾತನಾಡಿ ನೇರವಾಗಿ ಬದುಕಿದರೇ ಯಶಸ್ಸು ಸಿಗುವುದು ಖಂಡಿತ ಎನ್ನುವುದು ತಿಳಿಯಿತು.
ಬಿಗ್ ಬಾಸ್ ಬಗ್ಗೆ?
ಬಿಗ್ ಬಾಸ್ ಮನೆಯಲ್ಲಿ ನಾಟಕ ಮಾಡುವ ಹಲವು ಮಂದಿ ಇದ್ದರು. ತುಂಬಾ ಅತ್ತಿದ್ದೇನೆ, ನಕ್ಕಿದ್ದೇನೆ. ನನ್ನ ದ್ರಷ್ಟಿಕೋನದಲ್ಲಿ ಬಿಗ್ ಬಾಸ್ ಉತ್ತಮ ಕಾರ್ಯಕ್ರಮ. ತುಂಬಾ ಕಲಿಯಲು ಅವಕಾಶ ಸಿಕ್ಕಿದೆ.
ಕನ್ನಡ ಕಲಿಯಲು ಬಿಗ್ ಬಾಸ್ ಸಹಕಾರವಾಗಿತ್ತೇ?
ಮೊದಲೇ ಕನ್ನಡ ಕಲಿತಿದ್ದೆ. ಆದರೇ ಹೊರಗಡೆ ಹೇಗೆ ಮಾತನಾಡಿದರೂ ಶಿಕ್ಷೆ ಕೊಡುವವರು ಇರಲಿಲ್ಲ. ನಾಲ್ಕು ಬಾರಿ ಇಂಗ್ಲೀಷ್ ಮಾತನಾಡಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ ಕೊಟ್ಟರು.
ಬಿಗ್ ಬಾಸ್ ಮನೆಯಲ್ಲಿ ಇಷ್ಟ ಯಾರು?
ನೇರವಾಗಿ ಮಾತನಾಡಿ ಇರೋದನ್ನು ಇರುವ ಹಾಗೆ ಹೇಳುವ ಸುಷ್ಮಾ ನನ್ನ ಬಿಗ್ ಬಾಸ್ ಮನೆಯ ಗೆಳೆತಿಯಾಗಿದ್ದಾರೆ. ಅವರನ್ನು ಅರ್ಥ ಮಾಡಿಕೊಳುವುದು ಕಷ್ಟ ಆದರೇ ಅರ್ಥ ಮಾಡಿಕೊಂಡರೇ ಅವರೊಬ್ಬ ಉತ್ತಮ ಗೆಳತಿ.
ಮುಂದಿನ ಸಿನೆಮಾಗಳ ಬಗ್ಗೆ?
‘ದಂಡುಪಾಳ್ಯ-2’, ‘ಜಿಲೇಬಿ’ ಚಿತ್ರದ ಹಾಡಿನ ಶೂಟಿಂಗ್ ಈಗಾಗಲೇ ಮಾಡುತ್ತಿರುವೆ.ತಮಿಳು ನಿರ್ದೇಶಕರೊಬ್ಬರ ನಿರ್ದೇಶನದ ‘ಮದ್ದಾನೆ’ ಎನ್ನುವ ಚಿತ್ರದಲ್ಲಿ ಬಸ್ ಕಂಡಕ್ಟರ್ ಪಾತ್ರ ಮಾಡುತ್ತಿರುವೆ. ಕರಾವಳಿ ಬಗೆಗೆಇನ ಒಂದು ಪುಸ್ತಕ ಓದಿದ್ದು ಅದನ್ನು ಸಿನೆಮಾ ರೂಪಕ್ಕೆ ತರುವ ಇರಾದೆಯಿದೆ. ನಮ್ಮ ಪ್ರೊಡಕ್ಷನ್ ಮೂಲಕ ಅದನ್ನು ಮಾಡುವ ಹಂಬಲವಿದೆ.
ಕರಾವಳಿ ಬಗ್ಗೆ ನಿಮ್ಮ ಅಭಿಪ್ರಾಯ?
ನನ್ನ ಫೆವರೇಟ್ ಜಾಗ ಉಡುಪಿ ಹಾಗೂ ಮಂಗಳೂರು. ನನಗೆ ಮೀನು ಖಾದ್ಯಗಳು ಇಷ್ಟ. ಕುಂದಾಪುರದ ವಿ.ಕೆ. ಮೋಹನ್ ಅವರು ನನ್ನ ಫ್ಯಾಮಿಲಿ ಫ್ರೆಂಡ್. ಇಲ್ಲಿಗೆ ಬಂದಾಗಲೆಲ್ಲಾ ಫಿಶ್ ಕರಿ ತಿಂದು ಖುಷಿಪಡುವೆ.
ಸಂದರ್ಶನ- ಯೋಗೀಶ್ ಕುಂಭಾಸಿ