ಕುಂದಾಪುರ: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬೀಜಾಡಿ ಜಿ.ಪಂ ಹಾಗೂ ಕೋಟೇಶ್ವರ ಜಿ.ಪಂ. ಕ್ಷೇತ್ರದ ಬಿಜೆಪಿ ಟಿಕೇಟ್ ಹಂಚಿಕೆಯಲ್ಲಿ ತಾರತಮ್ಯ ಮಾಡಿ ನಮಗೆ ಅನ್ಯಾಯ ಮಾಡಲಾಗಿದೆಯೆಂದು ಕೊಂಚ ಮುನಿಸಿಕೊಂಡಿದ್ದ ಈ ಎರಡು ಕ್ಷೇತ್ರಗಳ ಟಿಕೇಟ್ ಆಂಕಾಕ್ಷಿಗಳು ಸದ್ಯ ಎಲ್ಲವನ್ನು ಮರೆತು ನಾವೆಲ್ಲಾ ಒಂದೇ ಎನ್ನುವ ಜೊತೆಜೊತೆಗೆ ಬಿಜೆಪಿ ಅಬ್ಯರ್ಥಿ ಪರ ಭರ್ಜರಿ ಮತಯಾಚನೆ ಮಾಡ್ತಿದಾರೆ.

(ಜಿ.ಪಂ. ಬೀಜಾಡಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀಲತಾ ಶೆಟ್ಟಿ)
ಹೌದು..ವಾರಗಳ ಹಿಂದಿನವರೆಗೂ ಇದ್ದ ಅಸಮಾಧಾನ ಮುನಿಸು ಈಗಿಲ್ಲ. ಟಿಕೇಟ್ ಕೈತಪ್ಪಿ ಹೋದ ಬೇಸರವೂ ಇಲ್ಲ. ಈಗೆಲ್ಲರೂ ಒಗ್ಗೂಡಿ ಮತಯಾಚನೆ ಮಾಡ್ತಿರೋ ದೃಶ್ಯ ಬೀಜಾಡಿ ಗೋಪಾಡಿ ಪರಿಸರದಲ್ಲಿ ಕಂಡುಬರುತ್ತಿದೆ. ಬೀಜಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಗೋಪಾಡಿ ಗ್ರಾಮಪಂಚಾಯತ್ ಹಾಲಿ ಸದಸ್ಯೆ ಸರಸ್ವತಿ ಪುತ್ರನ್ ಹಾಗೂ ಕೋಟೇಶ್ವರ ಜಿಲ್ಲಾಪಂಚಾಯತ್ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಕಲ್ಪನಾ ಭಾಸ್ಕರ್ ಸದ್ಯ ತಮ್ಮೆಲ್ಲಾ ಅಸಮಧಾನಗಳನ್ನು ಮರೆತು ಒಗ್ಗೂಡಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಶ್ರೀಲತಾ ಶೆಟ್ಟಿ ಪರವಾಗಿ ಅಲ್ಲಲ್ಲಿ ಮನೆಮನೆಗೆ ತೆರಳಿ ಮತಯಾಚನೆಯನ್ನು ನಡೆಸುತ್ತಿರುವುದಲ್ಲದೇ ಜನರ ಕಷ್ಟಗಳನ್ನು ಆಲಿಸುತ್ತಾ ಅವರಿಗೆ ಸಮಸ್ಯೆ ಪರಿಹರಿಸುವ ಭರವಸೆಯನ್ನು ಕೊಡ್ತಿದ್ದಾರೆ.


ಟಿಕೇಟ್ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆಯೆಂದು ವಾರಗಳ ಹಿಂದೆ ಅಸಮಾಧಾನಗೊಂಡಿದ್ದ ಇಬ್ಬರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ಹೊರಟಿದ್ದರು. ಇದಕ್ಕಾಗಿಯೇ ತಮ್ಮ ಜೊತೆಗಿರುವ ಕಾರ್ಯಕರ್ತರು ಹಾಗೂ ಹಿತೈಷಿಗಳ ಅಭಿಪ್ರಾಯ ಪಡೆದು ಸ್ಪರ್ಧೆಯ ತೀರ್ಮಾನಕ್ಕೂ ಬಂದಿದ್ದರು. ಈ ಬಗ್ಗೆ ಪಕ್ಷದ ಮುಖಂಡರೂ ರಾಜಿ ನಡೆಸಲು ಮುಂದಾದರೂ ಪ್ರಯೋಜನವಾಗಿರಲಿಲ್ಲ. ಆದರೇ ಕೊನೆಯ ಹಂತದಲ್ಲಿ ಪಕ್ಷದ ಮುಖಂಡರು ಜೊತೆ ನಡೆದ ಮಾತುಕತೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಕ್ಕೆ ಬಂದಿದ್ದರು.
ಈತನ್ಮಧ್ಯೆ ಇಬ್ಬರು ಪ್ರಚಾರದಲ್ಲಿ ಭಾಗವಹಿಸುತ್ತಾರೆಯೇ, ಚುನಾವಣೆ ಕೆಲಸ ಮಾಡುತ್ತಾರಾ ಎಂಬ ಕುತೂಹಲ ಪಕ್ಷದರಲ್ಲಿ ಹಾಗೂ ಸ್ಥಳಿಯರಲ್ಲಿ ಇದ್ದಿತ್ತು. ಇದೆಲ್ಲಾ ಗೊಂದಲಕ್ಕೂ ತೆರೆ ಎಳೆಯುವಂತೆ ಮುನಿಸಿಕೊಂಡಿದ್ದ ಇಬ್ಬರು ಬೀಜಾಡಿ ಕ್ಷೇತ್ರದ ಅಭ್ಯರ್ಥಿ ಶ್ರೀಲತಾ ಶೆಟ್ಟಿ ಪರವಾಗಿ ಮತಯಾಚನೆ ಮಾಡ್ತಿದ್ದಾರೆ. ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ತಮ್ಮ ವಾರ್ಡಿನಲ್ಲಿ ಭಾನುವಾರ ಪ್ರಚಾರ ಮಾಡಿದ್ದು ಮಂಗಳವಾರವೂ ಸತತ ಪ್ರಚಾರ ಮಾಡಲಿದ್ದಾರೆ. ಇನ್ನು ಕಲ್ಪನಾ ಭಾಸ್ಕರ್ ಅವರು ಸೋಮವಾರ ಬೀಜಾಡಿ, ಗೋಪಾಡಿ ಭಾಗದಲ್ಲಿ ಮತಯಾಚನೆ ನಡೆಸಿದ್ದು ಕೋಟೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿಯ ಪರವೂ ಮತ ಯಾಚನೆ ನಡೆಸ್ತೇನೆ, ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ, ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದಿದ್ದಾರೆ.
– ಕಲ್ಪನಾ ಭಾಸ್ಕರ್
ಗ್ರಾಮದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ನವೆಲ್ಲಾರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಶ್ರೀಲತಾ ಶೆಟ್ಟಿಯವರ ಚುರುಕುತನ ಅವರನ್ನು ಗೆಲ್ಲಿಸಲಿದೆ. ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯಗಳು ಇಲ್ಲ ಎಂದು ‘ಕನ್ನಡಿಗ ವರ್ಲ್ದ್’ಗೆ ಸರಸ್ವತಿ ಪುತ್ರನ್ ಹೇಳಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ