ಮಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಸುದ್ದಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ಬೆಲೆಯ ವಾಚ್ ಮೇಲೆ ಇದೀಗ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರೂ ಕಣ್ಣು ಹಾಯಿಸಿದ್ದು, ತಮ್ಮಲ್ಲಿರುವ 70 ಲಕ್ಷ ಮೌಲ್ಯದ ದುಬಾರಿ ವಾಚನ್ನು ಮೊದಲು ಹರಾಜು ಹಾಕಿ. ಅದರಿಂದ ಬಂದ ಹಣವನ್ನು ಸಿಯಾಚಿನ್ ಹಿಮಪಾತಕ್ಕೆ ಬಲಿಯಾದ ರಾಜ್ಯದ ಮೂರು ಯೋಧರ ಕುಟುಂಬಗಳಿಗೆ ಪರಿಹಾರ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೂಜಾರಿ ಸಲಹೆ ನೀಡಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರೀತಿ ಮಾಡಿದರೆ ಚರಿತ್ರೆಯಲ್ಲಿ ಒಬ್ಬ ವ್ಯಕ್ತಿಯಾಗುತ್ತೀರಿ. ನಾಡಿನ ಆರು ಕೋಟಿ ಜನತೆ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ನಿಮ್ಮ ತಪ್ಪಿನಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು, ಕಾರ್ಯಕರ್ತರಲ್ಲಿ ಬೇಸರ ಮೂಡುತ್ತಿದೆ. ತಪ್ಪು ಮಾಡುವುದು ಮನುಷ್ಯನ ಗುಣ ಆದರೆ ತಿದ್ದಿ ನಡೆಯುವುದು ದೈವಗುಣವಾಗಿದೆ. ಜನರು ನಿಮ್ಮನ್ನು ಕ್ಷಮಿಸುತ್ತಾರೆ ಎಂದು ಅವರು ಹೇಳಿದರು.
ನೀವು ಕಟ್ಟಿಕೊಂಡಿರುವ ವಾಚ್ ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಿದೆ. ಇಷ್ಟೊಂದು ದುಬಾರಿಯಾಗಿರುವ ವಾಚ್ ನ ಅವಶ್ಯಕತೆ ನಿಮಗಿತ್ತೇ? ಆ ವಾಚ್ ನ್ನು ಹರಾಜು ಹಾಕಿ ಸಿಯಾಚಿನ್ ಹುತಾತ್ಮ ಕನ್ನಡಿಗ ಯೋಧರಿಗೆ ಹಂಚಿ. ಆಗ ನಿಮ್ಮನ್ನು ಜನತೆ ಮೆಚ್ಚುತ್ತಾರೆ. ಮುಖ್ಯಮಂತ್ರಿಯಾಗಿ ಮಾದರಿ ಕೆಲಸ ಮಾಡುವುದು ನಿಮ್ಮ ರಾಜ ಧರ್ಮ. ನೀವು ಪ್ರಾಮಾಣಿಕರು. ಪ್ರಾಮಾಣಿಕತೆ ಬರುವುದು ತಪಸ್ಸಿನಿಂದ. ನಿಮಗೆ ಆ ವಾಚ್ ಬೇಕಾ? ಇನ್ನೊಬ್ಬರತ್ತ ಬೆರಳು ತೋರಿಸುವ ಮೊದಲು ನಾವು ಸರಿಯಾಗಿರಬೇಕು ಎಂದು ಪರೋಕ್ಷವಾಗಿ ಸಿಎಂಗೆ ಟಾಂಗ್ ನೀಡಿದರು.
ಹಿಂದೆ ಮೋದಿಯವರು ದುಬಾರಿ ಸೂಟ್ ಹಾಕಿದ್ದಾಗ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ಆದರೆ ಈಗ ಕಾರ್ಯಕರ್ತರು ಏನು ಹೇಳಲು ಸಾಧ್ಯ? ಸೋನಿಯಾ, ರಾಹುಲ್ ಪ್ರಶ್ನಿಸಿದರೆ ಏನು ಹೇಳುತ್ತೀರಿ? ಆದ್ದರಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಿ. ಜನತೆ ಕ್ಷಮಿಸುತ್ತಾರೆ ಎಂದು ಆಗ್ರಹಿಸಿದರು.
ಯೋಧನ ಕುಟುಂಬಕ್ಕೆ 25 ಲಕ್ಷ ಸಹಾಯ, ನಾಲ್ಕು ಎಕರೆ ಭೂಮಿ, ಕುಟುಂಬದ ಒಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದೀರಿ. ಇದು ನಿಮ್ಮ ಹೃದಯ ವೈಶಾಲ್ಯತೆ ತೋರಿಸುತ್ತದೆ. ಜನ ಮೆಚ್ಚುವಂತಹ ಕೆಲಸವನ್ನು ಮಾಡಿದ್ದೀರಿ. ಆದರೆ ಈ ವಾಚ್ ನಿಮ್ಮ ಶುದ್ಧ ಚಾರಿತ್ರ್ಯಕ್ಕೊಂದು ಕಪ್ಪುಚುಕ್ಕೆಯಾಗಿದೆ ಎಂದರು.
ಜೀವನ್ಮರಣ ಹೋರಾಟ ನಡೆಸಿ ಹುತಾತ್ಮರಾದ ಧಾರವಾಡ ಮೂಲದ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಅವರ ಜೀವನ ಯುವ ಜನಾಂಗಕ್ಕೆ ಮಾದರಿಯಾಗಿದೆ. ಬಹಳ ಧೈರ್ಯಶಾಲಿಯಾಗಿದ್ದ ಹನುಮಂತಪ್ಪ ಕೊಪ್ಪದ್ ಅವರ ಜೀವನ ಚರಿತ್ರೆ ಬರೆದು ಪ್ರಾಥಮಿಕ ಶಿಕ್ಷಣದ ಪಾಠ ಪುಸ್ತಕದಲ್ಲಿ ಸೇರ್ಪಡೆ ಗೊಳಿಸಬೇಕು. ಅಲ್ಲದೆ ಹನುಮಂತಪ್ಪ ಅವರಿಗಾಗಿ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಪೂಜಾರಿ ಅವರು ರಾಜ್ಯ ಸರಕಾರ ವನ್ನು ಆಗ್ರಹಿಸಿದರು.
ಈ ಧೀರ ಯೋಧನ ಕುಟುಂಬಕ್ಕೆ ಮತ್ತು ರಾಜ್ಯದ ಇತರ ಇಬ್ಬರು ಹುತಾತ್ಮರ ಕುಟುಂಬಗಳಿಗೆ ಸರಕಾರದ ವತಿಯಿಂದ ಭೂಮಿ ಕೊಟ್ಟು ಅವರಿಗೆ ಆತ್ಮಸ್ಥೈರ್ಯ ಮತ್ತು ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎಂದು ಪೂಜಾರಿ ಮನವಿ ಮಾಡಿದರು.