ಕನ್ನಡ ವಾರ್ತೆಗಳು

ಚಿನ್ನಾಭರಣ ಖರೀದಿಗೆ ಪಾನ್‌ ಕಾರ್ಡ್‌ ಕಡ್ಡಾಯ : ಜಿಲೆಯಾದ್ಯಂತ ಸ್ವರ್ಣೋದ್ಯಮಿಗಳಿಂದ ಪ್ರತಿಭಟನೆ

Pinterest LinkedIn Tumblr

small_sacl_protest_1

ಮಂಗಳೂರು: 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಗೆ ಪಾನ್‌ ಕಾರ್ಡ್‌ ಕಡ್ಡಾಯ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸ್ವರ್ಣೋದ್ಯಮಿಗಳು ನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ ಕರೆಯಂತೆ ಬುಧವಾರ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ತಮ್ಮ ಮಳಿಗೆಗಳನ್ನು ಮುಚ್ಚಿ ಮಂಗಳೂರಿನ ಸ್ವರ್ಣ ವ್ಯಾಪಾರಿಗಳು ಮತ್ತು ಸ್ವರ್ಣ ವ್ಯಾಪಾರ ಮಳಿಗೆಗಳ ಉದ್ಯೋಗಿಗಳು ನಗರದ ರಥಬೀದಿಯ ಟೆಂಪಲ್‌ ಸ್ಕ್ವೇರ್‌ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಘದ ಕಾರ್ಯದರ್ಶಿ ನಾಗರಾಜ ಪಾಲ್ಕೆ, ಪ್ರಶಾಂತ್‌ ಶೇಟ್‌ ಮತ್ತು ಇತರ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. 2 ಲ. ರೂ. ಸ್ವರ್ಣ ಖರೀದಿಗೆ ಪಾನ್‌ಕಾರ್ಡ್‌ ಕಡ್ಡಾಯ ಕಾನೂನು ಸರಳೀಕರಿಸಿ ಖರೀದಿ ಮಿತಿಯನ್ನು 10 ಲ.ರೂ. ಅಥವಾ ಕನಿಷ್ಠ 5 ಲ.ರೂ.ಗಳಿಗಾದರೂ ನಿಗದಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಫ‌ಲಕಾರಿಯಾಗದ ಕಾರಣ ಬಂದ್‌ ಆಚರಿಸಿ ಪ್ರತಿಭಟನೆ ನಡೆಸಲಾಯಿತು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು ಹೊಸ ನೀತಿಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು. ಪ್ರತಿಭಟನೆ ಬಳಿಕ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತು.

small_sacl_protest_2 small_sacl_protest_3 small_sacl_protest_4 small_sacl_protest_5

ಸ್ವರ್ಣ ಶಿಲ್ಪ ಕಲೆಗೆ 2,000 ವರ್ಷಗಳ ಇತಿಹಾಸವಿದೆ. ದೇಶದಲ್ಲಿ ಸುಮಾರು 1 ಕೋಟಿ ಸ್ವರ್ಣ ವ್ಯಾಪಾರಿಗಳಿದ್ದಾರೆ. ಕೋಟ್ಯಂತರ ಮಂದಿ ಉದ್ಯೋಗಿಗಳಿದ್ದಾರೆ. 2 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸ್ವರ್ಣಾಭರಣ ಖರೀದಿಗೆ ಪಾನ್‌ ಕಾರ್ಡ್‌ ಕಡ್ಡಾಯ ಮಾಡಿರುವುದು ಚಿನ್ನಾಭರಣ ವ್ಯಾಪಾರಕ್ಕೆ ಹೊಡೆತನೀಡಿದೆ. ಆದ್ದರಿಂದ ಅದನ್ನು ಈ ಹಿಂದಿನಂತೆ 5 ಲಕ್ಷ ರೂ.ಗಳ ಖರೀದಿಗೆ ನಿಗದಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸ್ವರ್ಣಾಭರಣ ಉದ್ಯಮವು ದೇಶದ ಜಿಡಿಪಿಗೆ ಶೇ. 3.5ರಷ್ಟು ಕೊಡುಗೆ ನೀಡುತ್ತದೆ. ದೇಶದಲ್ಲಿ ಒಟ್ಟು 22.5 ಕೋಟಿ ಜನರು ಮಾತ್ರ ಪಾನ್‌ ಕಾರ್ಡ್‌ ಹೊಂದಿದ್ದಾರೆ. ಅಂದರೆ ಶೇ. 86ಕ್ಕೂ ಅಧಿಕ ಜನರಲ್ಲಿ ಪಾನ್‌ ಕಾರ್ಡ್‌ ಇಲ್ಲ. ಚಿನ್ನಾಭರಣ ಗ್ರಾಹಕರಲ್ಲಿ ಶೇ. 70ರಷ್ಟು ಗ್ರಾಮಾಂತರ ಪ್ರದೇಶದವರಾಗಿದ್ದು, ಅವರಲ್ಲಿ ಬಹುಪಾಲು ಜನರು ಪಾನ್‌ ಕಾರ್ಡ್‌ ಹೊಂದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Write A Comment