ಕನ್ನಡ ವಾರ್ತೆಗಳು

ಸಹ್ಯಾದ್ರಿ ಸಂಚಯದಿಂದ ಎತ್ತಿನಹೊಳೆ ಯೋಜನೆ ವಿರುದ್ಧ ನೋಟಾ ಅಭಿಯಾನ : ಜಿ.ಪಂ ಮತ್ತು ತಾ,ಪಂ. ಚುನಾವಣೆಯಲ್ಲಿ ಯೋಜನೆ ಬೆಂಬಲಿಸುವವರಿಗೆ ಮತ ಹಾಕದಂತೆ ಮನವಿ

Pinterest LinkedIn Tumblr

netravati_Nota_Press_1

ಮಂಗಳೂರು : ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುವ ಪಕ್ಷಗಳಿಗೆ ಮತ ನೀಡದೆ ನೋಟಾ ಚಲಾಯಿಸುವ ಮೂಲಕ ಎತ್ತಿನಹೊಳೆ ಯೋಜನೆಯ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸುವಂತೆ ಸಂಚಯದ ಮೂಲಕ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಮಾಹಿತಿ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುವ ಪಕ್ಷಗಳಿಗೆ ಮತ ನೀಡದಂತೆ ಹಾಗೂ ಎತ್ತಿನಹೊಳೆ ಯೋಜನೆಯ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸುವಂತೆ ಇದೀಗ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನೋಟಾ ಅಭಿಯಾನದ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ನಾವು ಮುಂದಾಗಿದ್ದೇವೆ ಎಂದು ಹೇಳಿದರು.

netravati_Nota_Press_2 netravati_Nota_Press_3 netravati_Nota_Press_4 netravati_Nota_Press_5

ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ ಮತ್ತು ಅರ್ಥಹೀನ. ಯೋಜನೆಯ ವಿರುದ್ಧ ಹೋರಾಟ ಪ್ರತಿಭಟನೆಗಳನ್ನು ಲೆಕ್ಕಿಸದೇ ರಾಜ್ಯ ಸರಕಾರ ಕರಾವಳಿ ಜನತೆಯ ಮೇಲೆ ದಬ್ಬಾಳಿಕೆ ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಾಹ್ಯವಾಗಿ ಪರಸ್ಪರ ದೋಷಾರೋಪ ಮಾಡುತ್ತಾ ಯೋಜನೆಯ ಪರವಾಗಿದ್ದುಕೊಂಡು ಜನರಿಗೆ ಮೋಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಜೀವನದಿ ಮತ್ತು ಜೀವನಾಡಿಯಾಗಿರುವ ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಸಂಚಯವು ನೋಟಾ ಅಭಿಯಾನ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಸಹ್ಯಾದ್ರಿ ಸಂಚಯ ನೋಟಾ ಅಭಿಯಾನ ನಡೆಸಿತ್ತು. ಆಸಂದರ್ಭ ನೇತ್ರಾವತಿ ನದಿ ಬಗೆಗಿನ ಜನರ ಹೋರಾಟದ ಕಾವು ಅಷ್ಠಾಗಿ ಇಲ್ಲದಿದ್ದರೂ 7800ರಷ್ಟು ನೋಟಾ ಮತಗಳು ಚಲಾವಣೆಯಾಗಿತ್ತು. ಈ ಬಾರಿ ಹೋರಾಟದ ಕಾವು ಹೆಚ್ಚಾಗಿರುವುದರಿಂದ 70,000ಕ್ಕೂ ಅಧಿಕ ನೋಟಾ ಚಲಾವಣೆಯ ನಿರೀಕ್ಷೆ ಇದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಎತ್ತಿನಹೊಳೆ ಯೋಜನೆಯನ್ನು ಕೈಬಿಡದಿದ್ದರೆ ಮುಂದಿನ ವಿಧಾನಸಭಾ ಚುನಾಣೆಯಲ್ಲಿ ಸಂಚಯದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ನಮಗಿಲ್ಲ. ಆದರೆ, ನಮ್ಮ ಜಲ, ನೆಲಕ್ಕೆ ಆಗುವ ಅಪಾಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನೋಟಾ ಅಭಿಯಾನ ನಾವು ಕೈಗೊಂಡಿದ್ದೇವೆ. ಬೀದಿಗಿಳಿದು ಹೋರಾಟಕ್ಕೆ ಜಿಲ್ಲೆಯ ಜನರು ಬಹುತೇಕವಾಗಿ ಹಿಂದೇಟು ಹಾಕುತ್ತಿದ್ದರೂ ಈ ಅಭಿಯಾನದ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲಿದ್ದಾರೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಹೋರಾಟಕ್ಕೆ ಬೆಂಬಲ ಘೋಷಿಸಿರುವ ವಿವಿಧ ಸಂಘಟನೆಗಳ ಮುಖಂಡರಾದ ನಾರಾಯಣ ಬಂಗೇರ, ಕಟೀಲು ದಿನೇಶ್ ಪೈ, ರಾಜೇಂದ್ರ ಚಿಲಿಂಬಿ ಮೊದಲಾದವರು ಉಪಸ್ಥಿತರಿದ್ದರು.

Write A Comment