
ಮಂಗಳೂರು,ಜ.28: ನೀರುಮಾರ್ಗದಲ್ಲಿರುವ ಬೃಹತ್ ವಸತಿ ಸಮುಚ್ಚಯದ ಬಳಿಯ ಪೊದೆಯೊಂದರಲ್ಲಿ ಇಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಮೃತ ವ್ಯಕ್ತಿ ಫ್ಲ್ಯಾಟ್ ಮೇಲಿನಿಂದ ಬಿದ್ದು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಮೃತ ವ್ಯಕ್ತಿ ಅಪರಿಚಿತನಾಗಿದ್ದು, ಸುಮಾರು 30ರಿಂದ 40 ವರ್ಷ ವಯಸ್ಸಿನವನಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯನ್ನು ಇದುವರೆಗೆ ಈ ಪರಿಸರದಲ್ಲಿ ಯಾರೂ ನೋಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶವದ ಪಕ್ಕದಲ್ಲಿ ರಕ್ತ ಅಂಟಿಕೊಂಡಿರುವ ಕಬ್ಬಿಣದ ಸಲಾಕೆಯೊಂದು ಸಿಕ್ಕಿದ್ದು. ಈತನ ಸಾವಿನ ಬಗ್ಗೆ ಹಲವು ಶಂಕೆಗಳು ಹುಟ್ಟಿಕೊಂಡಿದೆ, ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ .. ಅಥವಾ ಕೊಲೆ ಮಾಡಿ ಮೃತ ದೇಹವನ್ನು ಇಲ್ಲಿ ಎಸೆಯಲಾಗಿದೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಮೃತ ದೇಹ ಕಂಡು ಬಂದ ಸಮೀಪದಲ್ಲೇ ಇರುವ ವಸತಿ ಸಮ್ಮುಚ್ಚಯದಲ್ಲಿ ಈ ವ್ಯಕ್ತಿಯನ್ನು ಕಂಡ ಅದೇ ಪ್ಲಾಟ್ನ ಮಹಿಳೆಯೊಬ್ಬರು ಕಳ್ಳನಿರಬೇಕೆಂದು ಶಂಕಿಸಿ ಜೋರಾಗಿ ಕಿರುಚಿದ್ದಾರೆ. ತಕ್ಷಣ ಪ್ಲಾಟ್ನ ಕಾವಲುಗಾರ ಈತನನ್ನು ಬೆನ್ನಟಿದ್ದಾಗ ಈ ವ್ಯಕ್ತಿ 6ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಕೂಡಲೇ ಪ್ಲಾಟಿನ ಕೆಲವು ನಿವಾಸಿಗಳು ಕಾವಲುಗಾರನ ಜೊತೆ ಸೇರಿ ಆವರಣದೊಳಗೆ ಬಿದ್ದಿದ್ದ ಹೆಣವನ್ನು ಕಂಪೌಂಡ್ ಗೋಡೆಯ ಈ ಬದಿಯಲ್ಲಿರುವ ಪೊದೆಗೆ ಎಸೆಯುವ ಮೂಲಕ ಹೆಣವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ, ಮಾತ್ರವಲ್ಲದೇ ವ್ಯಕ್ತಿ ಬಿದ್ದ ಸ್ಥಳದಲ್ಲಿದ್ದ ರಕ್ತದ ಕಲೆಗಳನ್ನು ಒರೆಸಿ ಸ್ವಚ್ಚಗೊಳಿಸಿದ್ದಾರೆ ಎಂದು ನೆರೆಮನೆಯ ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ ತನಿಖೆ ಕೈಗೊಂಡಿದ್ದಾರೆ. ಕಟ್ಟಡಕ್ಕೆ ಅಳವಡಿಸಲಾದ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗುತ್ತಿದೆ.ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರಗಳು ಪೊಲೀಸ್ ತನಿಖೆಯಿಂದ ಇನ್ನಷ್ಟೆ ತಿಳಿದು ಬರಬೇಕಿದೆ.