ಮಂಗಳೂರು, ಜ,28 : ಈಗಾಗಲೇ ಎರಡು ಎಸ್ಕಲೇಟರ್ ಅಳವಡಿಸಲಾಗಿರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮತ್ತೆರಡು ಎಸ್ಕಲೇಟರ್ ಮುಂದಿನ ತಿಂಗಳು ಕಾರ್ಯಾಚರಿಸಲಿದೆ ಎಂದು ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಆನಂದ ಪ್ರಕಾಶ ತಿಳಿಸಿದ್ದಾರೆ.
ಪಾಲಕ್ಕಾಡಿನಲ್ಲಿ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡುತ್ತಿದ್ದ ಅವರು, ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆ ದೃಷ್ಟಿಯಿಂದ ಎಸ್ಕಲೇಟರ್ ಅಳವಡಿಸಲಾಗುತ್ತಿದೆ ಎಂದರು.
2015 ಎಪ್ರಿಲ್‌ನಿಂದ ಡಿಸೆಂಬರ್‌ನವರೆಗೆ ಈ ರೈಲ್ವೇ ವಿಭಾಗದಲ್ಲಿ 5.8 ಪ್ರಯಾಣಿಕರು ಮತ್ತು 4.8 ಮಿಲಿಯನ್ ಟನ್ ಸರಕು ಸಾಗಾಟ ಸೇವೆ ನಡೆಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರ ಮೂಲದ ಸಹಿತ ಒಟ್ಟು 865.5 ಕೋಟಿ ರೂ ಆದಾಯ ಗಳಿಸಲಾಗಿದೆ ಎಂದವರು ಹೇಳಿದ್ದಾರೆಂದು ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.
ಎಂಆರ್‌ಪಿಎಲ್‌ನಿಂದ ಪೆಟ್ ಕೋಕ್ ಸಾಗಾಟದಲ್ಲಿ ಗಣನೀಯ ಏರಿಕೆಯಾಗಿದ್ದು, ಇದು ವಿಭಾಗದ ಆದಾಯ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ರೈಲ್ವೇಯು ಪ್ರಯಾಣಿಕರ ಸುರಕ್ಷತೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದೆ. ರೈಲ್ವೇ ಕಾಯ್ದೆಯಡಿ ನೀಡಲಾಗಿರುವ ನಿರ್ಬಂಧ ಹಾಗೂ ಎಚ್ಚರಿಕಾ ಕ್ರಮಗಳನ್ನು ನಿರ್ಲಕ್ಷಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆನಂದ ಪ್ರಕಾಶ್ ಎಚ್ಚರಿಸಿದರು.