ಕುಂದಾಪುರ: ದೇಶದ ಸಂವಿಧಾನ ಅಂಗೀಕರಿಸಿ ಸರ್ವತಂತ್ರ್ಯ ಸ್ವತಂತ್ರ್ಯ ದೇಶವೆಂದು ಘೋಷಿಸಿದ ಈ ಸುದಿನದಲ್ಲಿ ಎಲ್ಲರೂ ಶಾಂತಿ, ಸಹಬಾಳ್ವೆ, ಸಹೋದರತ್ವ ಹಾಗೂ ಜಾತ್ಯಾತೀತ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗಾಗಿ ಶ್ರಮಿಸಬೇಕು. ದೇಶದ ಸಂಸ್ಕ್ರತಿ, ಪರಂಪರೆ, ಇತಿಹಾಸ ಮತ್ತು ಜೀವನಾದರ್ಶಗಳನ್ನು ಪಾಲಿಸಿ ದೇಶದ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ಎಸ್. ಅಶ್ವತಿ ಹೇಳಿದ್ದಾರೆ.
ಅವರು ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಬೆಳಿಗ್ಗೆ ಕುಂದಾಪುರ ಗಾಂಧಿಮೈದಾನದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಗಣರಾಜ್ಯೋತ್ಸವ ಸಂದೇಶವನ್ನು ಹೇಳಿದ್ದಾರೆ.
ಕುಂದಾಪುರ ಪೊಲೀಸರು, ಹೋಮ್ ಗಾರ್ಡ್ಸ್, ಅಗ್ನಿಶಾಮಕ ದಳ, ವಿವಿಧ ಶಾಲೆಯ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಹಾಗೂ ಕುಂದಾಪುರದ ವಿವಿಧ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರೆದವರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಜಾಕೋಬ್ ಡಿಸೋಜಾ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ತಹಶಿಲ್ದಾರ್ ಗಾಯತ್ರಿ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.