
ಮಂಗಳೂರು : ನಗರದ ಬಿಜೈ ಬಳಿಯ ಮನೆಯೊಂದರ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಬಾವಿಗೆ ಬಿದ್ದು ಸಾವನ್ನಪ್ಪಿದ ಚಿಂತಾಜನಕ ಸಂಜೆ ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟ ಮಗುವನ್ನು ನಾಗರಾಜ್ ಮತ್ತು ವಿಜಯಲಕ್ಮಿ ದಂಪತಿಯ ಪುತ್ರಿ ಅಶ್ವಿನಿ ಎಂದು ಗುರುತಿಸಲಾಗಿದೆ.
ಈ ದಂಪತಿಗಳ ಮನೆಯಂಗಳದಲ್ಲಿದ್ದ ಬಾವಿಗೆ ಅಳವಡಿಸಲಾದ ರಕ್ಷಣಾ ಕವಚ ಮರಿದು ಹೋಗಿದ್ದರಿಂದ ಅದರ ಮೇಲೆ ಪ್ಲಾಸ್ಟಿಕ್ ಹಾಕಲಾಗಿತ್ತು. ತನ್ನ ಮನೆಯಂಗಳದಲ್ಲಿ ಎಂದಿನಂತೆ ಆಟವಾಡುತ್ತಾ ಅಲ್ಲೇ ಮನೆಯ ಮುಂಭಾಗದಲ್ಲಿದ್ದ ಬಾವಿಯ ಹತ್ತಿರ ಹೋಗಿದ್ದ ಮಗು ಬಾವಿಯ ಕಟ್ಟೆಯ ಮೇಲೆ ಹತ್ತಿ ಪ್ಲಾಸ್ಟಿಕ್ ಮೇಲೆ ಕಾಲಿಡುತ್ತಿದ್ದಂತೆಯೇ ಜಾರಿ ಬಾವಿಯೊಳಗೆ ಬಿದ್ದಿದೆ.

ಇದನ್ನು ಕಂಡ ಮಗುವಿನ ತಾಯಿ ಬೊಬ್ಬೆ ಹಾಕಿ ಬಾವಿಯ ಬಳಿ ತೆರಳಿದ್ದರು. ಜೊತೆಗೆ ಮನೆಯೊಳಗಿದ್ದ ಮಂದಿ ಮತ್ತು ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ದೌಡಾಯಿಸಿದ್ದು, ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಯುವಕರಿಬ್ಬರು ಬಾವಿಗೆ ಇಳಿದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.. ಆದರೆ ಬಾವಿ ಆಳವಾಗಿದ್ದಲ್ಲದೆ ಅದರಲ್ಲಿ ಭಾರೀ ಕೆಸರು ಶೇಖರಣೆ ಆಗಿದ್ದರಿಂದ ಮಗು ಕೆಸರಿನಲ್ಲಿ ಹೂತು ಹೋಗಿರುವುದೇ ಮಾತ್ರವಲ್ಲದೇ ಜೊತೆಗೆ ಬೆಳಕಿನ ಅಭಾವ ಮತ್ತು ಬಾವಿಯೊಳಗೆ ಉಸಿರಾಟಕ್ಕೆ ತೊಂದರೆಯಾದ ಕಾರಣ ಮಗುವನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.
ತಕ್ಷಣ ಸ್ಥಳೀಯ ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿ ಶಾಮಕ ದಳದವರು ಸುಮಾರು ಒಂದು ಗಂಟೆ ಪ್ರಯತ್ನಿಸಿದ ನಂತರ ಮಗುವಿನ ಶವವನ್ನು ಬಾವಿಯಿಂದ ಹೊರಕ್ಕೆತ್ತಲಾಗಿದೆ.
ಈ ದಂಪತಿಗಳು ಸುಮಾರು ಎರಡು ವರ್ಷದಿಂದ ನಗರದ ಬಿಜೈನ ನೋಡು ಲೇನ್‍ನಲ್ಲಿರುವ ಮನೆಯೊಂದರಲ್ಲಿ ಕೆಲಸಕ್ಕಿದ್ದು ಅಲ್ಲಿಯೇ ವಾಸವಾಗಿದ್ದರು.ಈ ದಂಪತಿಗಳು ಕಳೆದ ಎಂಟು ವರ್ಷಗಳ ಹಿಂದೆ ಮಂಗಳೂರಿಗೆ ಆಗಮಿಸಿ ಇಲ್ಲೆ ನೆಲೆಸಿದ್ದರು ಎನ್ನಲಾಗಿದೆ.