ಮಂಗಳೂರು : ಜಗತ್ತೇ ಬೆಚ್ಚಿ ಬೀಳುವ ರೀತಿಯಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರಗಾಮಿ ಸಂಘಟನೆ ಐಸಿಸ್‌ಗೆ ಸೇರಿದ್ದಾರೆಂಬ ಆರೋಪದ ಮೇಲೆ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ಈ ಇಬ್ಬರು ಶಂಕಿತ ಉಗ್ರರನ್ನು ಪ್ರತ್ಯೇಕ ಸ್ಥಳಗಳಾದ ಮಂಗಳೂರು ಮತ್ತು ತುಮಕೂರಿನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.
ಒಂದು ಪ್ರಕರಣದಲ್ಲಿ ಮಂಗಳೂರಿನ ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆ ಬಳಿಯ ನಜಾಮುವುಲ್ ಹುದಾ (25) ಎಂಬುವನನ್ನು ಮಂಗಳೂರು ಸಿಸಿಬಿ ಪೊಲೀಸರ ರಹಸ್ಯ ತಂಡ ಬಂಧಿಸಿದೆ ಎನ್ನಲಾಗಿದೆ. ಬಂಧಿತ ನಜಾಮುವುಲ್ ಹುದಾ ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದ ಎಂದು ಹೇಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ತುಮಕೂರಿನ ಪುರಸ್ ಕಾಲೋನಿಯ ಸೈಯದ್ ಹುಸೇನ್ (22) ಎಂಬಾತನನ್ನು ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಕಳೆದ ಆರು ತಿಂಗಳಿನಿಂದ ಈ ಇಬ್ಬರೂ ಶಂಕಿತರ ಚಲನವಲನಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ನಿಗಾ ವಹಿಸಿತ್ತು. ಬಳಿಕ ಇದೀಗ ಅವರನ್ನು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.