
ಮಂಗಳೂರು,ಜ.15 : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ತಮ್ಮ ಇಲಾಖೆಯ ಡಿಸಿಪಿಗಳು ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಜೊತೆ ಶುಕ್ರವಾರ ಜಿಲ್ಲಾ ಕಾರಾಗೃಹಕ್ಕೆ ಧಿಡೀರ್ ದಾಳಿ ನಡೆಸಿದ್ದಾರೆ
ಈ ಸಂದರ್ಭ ಆರೋಪಿಗಳು ಅಕ್ರಮವಾಗಿ ಬಳಸುತ್ತಿದ್ದ ಅನೇಕ ಮೊಬೈಲ್ ಗಳು ಹಾಗೂ ಗಾಂಜಾವನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ಅಯುಕ್ತ ಚಂದ್ರಶೇಖರ್ ಅವರ ನೇತ್ರತ್ವದಲ್ಲಿ ನಡೆದ ಈ ದಾಳಿ ಕಾರ್ಯಾಚರಣೆಯಲ್ಲಿ ಡಿಸಿಪಿ, ಎಸಿಪಿಗಳು ಸೇರಿದಂತೆ ಸುಮಾರು 150 ಕ್ಕೂಹೆಚ್ಚು ಪೊಲೀಸರು ಪಾಲ್ಗೊಂಡಿದ್ದರು. ಜೊತೆಗೆ ವಿಶೇಷ ಪೊಲೀಸ್ ದಳ ಮತ್ತು ಶ್ವಾನದಳ ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ದಾಳಿ ಸಂದರ್ಭ ಪೊಲೀಸರು ತಪಾಸಣೆ ಮಾಡಿದಾಗ ವಿಚಾರಣಾದೀನ ಕೈದಿಗಳು ಅಕ್ರಮವಾಗಿ ಬಳಸುತ್ತಿದ್ದರು ಎನ್ನಲಾದ 12 ಮೊಬೈಲ್ ಫೋನ್ಗಳು, ಮೂರು ಸಿಮ್ ಕಾರ್ಡ್, ಸ್ಕ್ರೂರ್ ಡ್ರೈವರ್ ಹಾಗೂ 10 ಗ್ರಾಂ ಗಾಂಜಾ ಸಿಕ್ಕಿದ್ದು ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಕಾರ್ಯಾಚರಣೆ ಬಳಿಕ ಪೊಲೀಸರು ವಶಪಡಿಸಿಕೊಂಡಿರುವ ಅಕ್ರಮ ವಸ್ತುಗಳನ್ನು ಬಳಸುತ್ತಿದ್ದ ಕೈದಿಗಳನ್ನು ಬೇರೆ ಬೇರೆ ಸೆಲ್ ಗಳಿಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.
ದಾಳಿ ಸಂದರ್ಭ ಡಿಸಿಪಿ ಡಾ.ಶಾಂತರಾಜು ( ಕಾನೂನು ಮತ್ತು ಸುವ್ಯವಸ್ಥೆ ), ಡಿಸಿಪಿ ಡಾ. ಸಂಜೀವ್ ಪಾಟೀಲ್ (ಅಪರಾಧ ), ಎಸಿಪಿ ತಿಲಕ್ಚಂದ್ರ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.