ಕನ್ನಡ ವಾರ್ತೆಗಳು

ಭಾರತ ಧರ್ಮ ಸಹಿಷ್ಣುತೆಯ ರಾಷ್ಟ್ರ : ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಸಚಿವ ಮಹದೇವಪ್ರಸಾದ್

Pinterest LinkedIn Tumblr

Dharmasthala_sravadharma

ಬೆಳ್ತಂಗಡಿ, ಡಿ.10: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ಬುಧವಾರ ಆಯೋಜಿಸಲಾಗಿರುವ ಸರ್ವಧರ್ಮ ಸಮ್ಮೇಳನದ 83ನೆ ಅಧಿವೇಶನದ ಉದ್ಘಾಟನೆಯನ್ನು ಸಹಕಾರ ಮತ್ತು ಸಕ್ಕರೆ ಖಾತೆಯ ಸಚಿವ ಎಚ್.ಎಸ್. ಮಹದೇವಪ್ರಸಾದ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಭಾರತ ಧರ್ಮ ಸಹಿಷ್ಣುತೆಯ ರಾಷ್ಟ್ರವಾಗಿದೆ. ಇದೀಗ ಅಲ್ಲಲ್ಲಿ ಸೃಷ್ಟಿಯಾಗುತ್ತಿರುವ ಅಸಹಿಷ್ಣುತೆಯ ಚಿಂತನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಭಿವೃದ್ಧಿ ನಮ್ಮ ಚಿಂತನೆಯಾಗಬೇಕೇ ಹೊರತು ಇನ್ನೊಬ್ಬರನ್ನು ದ್ವೇಷಿಸುವುದಲ್ಲ ಎಂದು ಹೇಳಿದರು.

ಜಗತ್ತಿನ ಎಲ್ಲ ಧರ್ಮಗಳೂ ಅಹಿಂಸೆ, ಸಹೋ ದರತೆಯ ಸಂದೇಶವನ್ನು ಸಾರುತ್ತವೆ. ಆದರೆ ಕೆಲವೇ ಕೆಲವರು ಧರ್ಮಸಂರಕ್ಷಕರೆನಿಸಿಕೊಂಡವರು, ಅವರ ಬೆಂಬಲಿಗರು ಧರ್ಮವನ್ನು ತಮ್ಮ ಅನುಕೂಲಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆ. ಇಂಥವರನ್ನು ನಿಯಂತ್ರಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹರಿದ್ವಾರದ ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ.ಪ್ರಣವ್ ಪಾಂಡ್ಯ ಮಾತನಾಡಿ, ಧರ್ಮಗಳು ನೀಡಿರುವ ಸಂದೇಶಗಳನ್ನು ಹಾಗೂ ಮೌಲ್ಯಗಳನ್ನು ಸಮ ರ್ಪಕವಾಗಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿನಲ್ಲಿ ತನ್ನಿಂತಾನೇ ಶಾಂತಿ ಸೌಹಾರ್ದ ನೆಲೆಸಲು ಸಾಧ್ಯವಿದೆ. ನಾವು ನಮಗಾಗಿ ಗಳಿಸುವುದರೊಂದಿಗೆ ಬುದ್ಧ, ಮಹಾವೀರರಂತೆ ಸಮಾಜಕ್ಕಾಗಿ ನೀಡುವ ಕಾರ್ಯ ಮಾಡಬೇಕು ಎಂದರು.

ಜಗತ್ತು ಪ್ರತಿದಿನ ಬದಲಾವಣೆಯತ್ತ ಬೆಳವಣಿಗೆಯತ್ತ ಸಾಗುತ್ತಿದೆ. ಆದರೆ ಇದರೊಂದಿಗೆ ಬಡ ತನ, ಅಪೌಷ್ಟಿಕತೆ, ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ.. ಈಗ ವಿಶ್ವ ಯುದ್ಧ ಗಳು ನಡೆಯುತ್ತಿಲ್ಲವಾದರೂ ದಿನನಿತ್ಯ ನಡೆಯು ತ್ತಿರುವ ಸಣ್ಣ ಯುದ್ಧಗಳು ಜಗತ್ತಿನಲ್ಲಿ ಅಶಾಂತಿಗೆ ಕಾರಣವಾಗುತ್ತಿವೆ. ಇಂತಹ ದಿನಗಳಲ್ಲಿ ವಿಶ್ವ ಕುಟುಂಬವೆಂಬ ಭಾರತೀಯ ಕಲ್ಪನೆಗೆ ಹೆಚ್ಚು ಮಹತ್ವ ಬರುತ್ತದೆ. ಅದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಜೀವನ ಮೌಲ್ಯ ಗಳನ್ನು ಬೆಳೆಸಿಕೊಂಡರೆ ಜಗತ್ತು ಶಾಂತಿ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಭಿನ್ನತೆಯ ಬದಲು ಪ್ರತ್ಯೇಕತೆಯಿಂದ ಏಕತೆ ಯನ್ನು ತರುವುದು ಹೇಗೆ ಎಂಬುದರ ಬಗ್ಗೆ ಇಂದು ಚಿಂತನೆ ನಡೆಯಬೇಕಾಗಿದೆ. ಬದುಕು ಮತ್ತು ಬದುಕಲು ಬಿಡಿ ಎಂಬುದು ನಮ್ಮ ಚಿಂತನೆಯಾಗಬೇಕು. ತನ್ನ ಧರ್ಮವನ್ನು ತಿಳಿದುಕೊಳ್ಳುವುದರೊಂದಿಗೆ ಇತರ ಧರ್ಮಗಳ ಬಗ್ಗೆ ಪರಸ್ಪರ ಅರಿವು ಮೂಡಿದಾಗ ನಮ್ಮ ಚಿಂತನೆಗಳು ವಿಶಾಲವಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಕಳೆದ ಎಂಟು ದಶಕಗಳಿಂದ ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಸಮ್ಮೇಳನದಲ್ಲಿ ‘ಜೈನ ಧರ್ಮದಲ್ಲಿ ಸಹಿಷ್ಣುತೆ’ ಎಂಬ ವಿಚಾರದ ಬಗ್ಗೆ ಚೆನ್ನೈಯ ತಮಿಳ್ ಸೆಲ್ವಿ, ಪಾರ್ಸಿ ಧರ್ಮದ ಬಗ್ಗೆ ಶೆರಿಯಾರ್ ಡಿ. ವಕೀಲ್ ಹಾಗೂ ‘ಇಸ್ಲಾಮ್ ಧರ್ಮದಲ್ಲಿ ಸಮನ್ವಯತೆಯ ದೃಷ್ಟಿ’ ಎಂಬ ವಿಚಾರದ ಬಗ್ಗೆ ಹಾಸನದ ಪ್ರೊ.ಸೈಯದ್ ಶಹಾಬುದ್ದೀನ್ ಉಪನ್ಯಾಸ ನೀಡಿದರು.

ಇದೇ ವೇಳೆ ಡಾ.ವೀರೇಂದ್ರ ಹೆಗ್ಗಡೆಯವರ ಅಧಿಕೃತ ವೆಬ್‌ಸೈಟ್‌ನ್ನು ಅನಾವರಣಗೊಳಿಸಲಾಯಿತು.

ಪ್ರೊ.ಎಸ್.ಪ್ರಭಾಕರ್, ಡಿ.ಸುರೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯ ದರ್ಶಿ ಡಾ.ಬಿ.ಯಶೋವರ್ಮ ಮೊದಲಾದವರು ಉಪಸ್ಥಿತರಿದ್ದರು. ಡಾ.ಎಲ್.ಎಚ್.ಮಂಜುನಾಥ್ ವಂದಿಸಿ ದರು. ಡಾ.ಬಿ.ಪಿ.ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವರದಿ ಕೃಪೆ : ವಾಭಾ

Write A Comment