ಕನ್ನಡ ವಾರ್ತೆಗಳು

ಪಣಂಬೂರು ಬಳಿ ಸಮುದ್ರ ಮಧ್ಯೆ ದೋಣಿ ಅವಘಡ : ಕೋಸ್ಟ್‌ಗಾರ್ಡ್‌‌ನಿಂದ ಐವರ ರಕ್ಷಣೆ

Pinterest LinkedIn Tumblr

Fishers_Boat_Palty

ಮಂಗಳೂರು, ಡಿ.7: ಪಣಂಬೂರು – ಸುರತ್ಕಲ್‌ನ ಸಮುದ್ರ ಮಧ್ಯೆ ದೋಣಿಯೊಂದು ಅವಘಡಕ್ಕೊಳಗಾದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ ಐವರು ಮೀನುಗಾರರನ್ನು ಕರ್ನಾಟಕ ತಟ ರಕ್ಷಣಾ ಪಡೆ ರಕ್ಷಿಸಿದೆ. ಅಲ್ಲದೆ ಕಾರ್ಯಾಚರಣೆಯಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯನ್ನೂ ರಕ್ಷಿಸಿದ್ದಾರೆ.

ಸುರತ್ಕಲ್‌ಗೆ 12.5 ನಾಟಿಕಲ್ ಮೈಲ್ ದೂರದಲ್ಲಿ ಹಡಗೊಂದರ ಅವಶೇಷಕ್ಕೆ ಢಿಕ್ಕಿಯಾದ ಮೀನುಗಾರಿಕಾ ದೋಣಿ ಅಪಾಯಕ್ಕೆ ಸಿಲುಕಿತ್ತು. ಈ ಬಗ್ಗೆ ತಕ್ಷಣ ಕೋಸ್ಟ್‌ಗಾರ್ಡ್‌ಗೆ ದೂರವಾಣಿ ಮೂಲಕ ಮಾಹಿತಿ ಬಂದಿತ್ತು. ಢಿಕ್ಕಿಯಿಂದಾಗಿ ದೋಣಿಯ ಹಿಂಬದಿ ಹಾನಿಗೊಂಡು ನೀರು ಇಂಜಿನ್ ಇರುವ ಕೋಣೆಯನ್ನು ಆವರಿಸಿತ್ತು.

ಮೀನುಗಾರರು ಅಪಾಯಕ್ಕೆ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಕೋಸ್ಟ್‌ಗಾರ್ಡ್ ವಿಭಾಗವು ತಕ್ಷಣವೇ ಮುಂಬೈಯಲ್ಲಿರುವ ಭಾರತೀಯ ತಟ ರಕ್ಷಣಾ ಪಡೆಯ ಸಾಗರ ಪರಿಹಾರ ಸಮನ್ವಯ ಕೇಂದ್ರಕ್ಕೆ ಮಾಹಿತಿ ರವಾನಿಸಿತ್ತು. ಸಮನ್ವಯ ಕೇಂದ್ರ ಮಂಗಳೂರಿನಲ್ಲಿರುವ ಸಾಗರ ಪರಿಹಾರ ಸಮನ್ವಯ ಉಪ ಕೇಂದ್ರಕ್ಕೆ ಮಾಹಿತಿ ನೀಡಿ ಶೀಘ್ರದಲ್ಲೇ ಪರಿಹಾರ ಕೈಗೊಳ್ಳುವಂತೆ ನಿರ್ದೇಶನ ನೀಡಿತು.

ಇದರನ್ವಯ ಕರ್ನಾಟಕ ತಟ ರಕ್ಷಣಾ ಜಿಲ್ಲೆಯ ಕ್ರ. ಸಂಖ್ಯೆ 100ರ ಹಡಗನ್ನು ಪರಿಹಾರ ಕಾರ್ಯಾಚರಣೆಗಾಗಿ ರವಾನಿಸಲಾಯಿತು. ಈ ಹಡಗು ತುರ್ತಾಗಿ ಸ್ಥಳಕ್ಕೆ ಧಾವಿಸಿ ಮೀನುಗಾರರನ್ನು ರಕ್ಷಿಸಿದೆ ಎಂದು ಕೋಸ್ಟ್‌ಗಾರ್ಡ್ ಪ್ರಕಟನೆ ತಿಳಿಸಿದೆ.

Write A Comment