ರಾಷ್ಟ್ರೀಯ

ಚೆನ್ನೈನ ಪ್ರವಾಹದಿಂದ ಐಟಿ ಕಂಪೆನಿಗಳಿಗೆ 60 ಮಿ.ಡಾ.ನಷ್ಟ

Pinterest LinkedIn Tumblr

7_2

ಚೆನ್ನೈ,ಡಿ.7:ಚೆನ್ನೈಯನ್ನು ಕಾಡಿದ ಭೀಕರ ಪ್ರವಾಹ ಐಟಿ ಉದ್ಯಮಕ್ಕೆ ಭಾರೀ ನಷ್ಟವನ್ನುಂಟು ಮಾಡಿದೆ. ಮಧ್ಯಮ ಗಾತ್ರದ ಕಂಪೆನಿಗಳಿಗೆ 5ರಿಂದ 10 ಮಿ.ಡಾ.ಮತ್ತು ದೊಡ್ಡ ಕಂಪೆನಿಗಳಿಗೆ 40ರಿಂದ 50 ಮಿ.ಡಾ.ನಷ್ಟ ಸಂಭವಿಸಿದೆ ಎನ್ನುವುದು ಉದ್ಯಮದ ಅಂದಾಜು.

ಕಾಗ್ನಿಝಂಟ್,ಇನ್ಫೋಸಿಸ್,ಟಿಸಿಎಸ್ ಮತ್ತು ಇತರ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಬೆಂಗಳೂರಿಗೆ ರವಾನಿಸಲು ಪ್ರತಿ ಗಂಟೆಗೊಮ್ಮೆ ಬಸ್‌ಗಳನ್ನು ನಿಯೋಜಿಸಿವೆ. ಈ ಕಂಪೆನಿಗಳ ತಲಾ 2,000 ಉದ್ಯೋಗಿಗಳು ಈಗಾಗಲೇ ಕರ್ತವ್ಯಕ್ಕಾಗಿ ಬೆಂಗಳೂರಿಗೆ ತೆರಳಿದ್ದಾರೆ. ಐಟಿ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗಗಳು ಚೆನ್ನೈನಲ್ಲಿರುವ ನೌಕರರ ಸ್ಥಿತಿಗತಿಯನ್ನು ಅರಿತುಕೊಳ್ಳಲು ಪ್ರತಿಯೊಬ್ಬರನ್ನೂ ಸಂಪರ್ಕಿಸುವ ಪ್ರಯತ್ನದಲ್ಲಿವೆ. ಹೆಚ್ಚಿನ ನೌಕರರು ಇನ್ನೂ ಮನೆಗಳಿಂದ ಹೊರ ಬರಲಾಗದ ಸ್ಥಿತಿಯಲ್ಲಿದ್ದಾರೆ.

ಅತ್ತ ವಾಹನಗಳ ಉದ್ಯಮರಂಗವೂ ಸುಮಾರು 15,000 ಕೋ.ರೂ. ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಇಂಜಿನಿಯರಿಂಗ್,ಜವಳಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳೂ ಪ್ರವಾಹದಿಂದಾಗಿ ನಷ್ಟಕ್ಕೆ ಗುರಿಯಾಗಿವೆ ಎಂದು ಅಸೋಚಾಮ್ ಹೇಳಿದೆ.

ಹುಂಡೈ,ರೆನಾಲ್ಟ್-ನಿಸ್ಸಾನ್,ಅಶೋಕ ಲೇಲ್ಯಾಂಡ್ ಮತ್ತು ರಾಯಲ್ ಎನ್‌ಫೀಲ್ಡ್ ಕಂಪೆನಿಗಳು ನೌಕರರ ಕೊರತೆಯನ್ನು ಎದುರಿಸುತ್ತಿದ್ದು,ತಯಾರಿಕಾ ಚಟುವಟಿಕೆಗಳು ಹೆಚ್ಚುಕಡಿಮೆ ಸ್ಥಗಿತಗೊಂಡಿವೆ. ಚೆನ್ನೈ ವಾಹನಗಳ ಬಿಡಿಭಾಗಗಳ ತಯಾರಿಕೆಯ ಪ್ರಮುಖ ಕೇಂದ್ರವೂ ಆಗಿರುವುದರಿಂದ ಪ್ರವಾಹದ ಪರೋಕ್ಷ ಪರಿಣಾಮ ದೇಶಾದ್ಯಂತ ವಾಹನ ತಯಾರಿಕೆ ಕಾರ್ಖಾನೆಗಳ ಮೇಲೂ ಉಂಟಾಗಲಿದೆ.

ಅಭೂತಪೂರ್ವ ಮಳೆ ಮತ್ತು ಪ್ರವಾಹದ ಸಂಕಷ್ಟದಿಂದ ಹೊರಬರಲು ಚೆನ್ನೈ ಇನ್ನೂ ಪರದಾಡುತ್ತಿದ್ದು, ಅಕ್ಟೋಬರ್ ಕೊನೆಯಿಂದ ಮಹಾನಗರ ಮತ್ತು ನೆರೆಯ ಜಿಲ್ಲೆಗಳನ್ನು ಕಾಡಿದ ಕುಂಭದ್ರೋಣ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 450ಕ್ಕೇರಿದೆ.

Write A Comment