ರಾಷ್ಟ್ರೀಯ

ತ.ನಾ.ನೆರೆ ಪರಿಹಾರ: ವಿವಾದ ಸೃಷ್ಟಿಸಿರುವ ‘ಅಮ್ಮಾ ಸ್ಟಿಕ್ಕರ್’

Pinterest LinkedIn Tumblr

s

ಚೆನ್ನೈ,ಡಿ.7: ಪರಿಹಾರ ಸಾಮಗ್ರಿಗಳ ಮೇಲೆ ತಮಿಳುನಾಡು ಸಿಎಂ ಜಯಲಲಿತಾರ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ಎಡಿಎಂಕೆ ಕಾರ್ಯಕರ್ತರು ಎನ್‌ಜಿಒಗಳನ್ನು ಒತ್ತಾಯಿಸುತ್ತಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆರೋಪ, ಪರಿಹಾರ ಕಾರ್ಯಾಚರಣೆಯ ಮೇಲೆ ಕರಿನೆರಳು ಬೀರಿದೆ. ಆದರೆ ಆಡಳಿತ ಪಕ್ಷವು ಆರೋಪವನ್ನು ನಿರಾಕರಿಸಿದೆ.

ಪರಿಹಾರ ಸಾಮಗ್ರಿಗಳ ಮೇಲೆ ‘ಅಮ್ಮಾ’ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ‘ಎಡಿಎಂಕೆ ಕಾರ್ಯಕರ್ತರು ’ಎನ್‌ಜಿಒಗಳು ಮತ್ತು ಸ್ವಯಂ ಸೇವಕರಿಗೆ ಸೂಚಿಸುತ್ತಿದ್ದಾರೆಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬೆನ್ನಿಗೇ ಚುರುಕಾದ ಆಡಳಿತ ಪಕ್ಷವು ಪ್ರತಿ ಸಂದೇಶಗಳನ್ನು ರವಾನಿಸಿದೆ.

ಈ ಆರೋಪ ಸುಳ್ಳು ಎಂದಿರುವ ಎಡಿಎಂಕೆ, ಇಂತಹ ಒತ್ತಾಯವನ್ನು ಯಾರಾದರೂ ಮಾಡಿದರೆ ಪಕ್ಷದ ಕೇಂದ್ರ ಕಚೇರಿಗೆ ಅಥವಾ ಪೊಲೀಸರಿಗೆ ದೂರು ಸಲ್ಲಿಸುವಂತೆ ಸ್ವಯಂಸೇವಕರನ್ನು ಕೇಳಿಕೊಂಡಿದೆ.

ಈ ಆರೋಪವು ಸುಳ್ಳು ಎನ್ನುವುದನ್ನು ನಾವು ಪುನರುಚ್ಚರಿಸುತ್ತೇವೆ. ಪಕ್ಷ ಮತ್ತು ನಮ್ಮ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯಲು ನಿರ್ಲಜ್ಜ ಶಕ್ತಿಗಳು ಈ ವದಂತಿಯನ್ನು ಹಬ್ಬಿಸುತ್ತಿವೆ ಎಂದು ಎಡಿಎಂಕೆಯ ಹಿರಿಯ ಪದಾಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಈ ಕುತಂತ್ರಿಗಳನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪರಿಹಾರ ಸಾಮಗ್ರಿಗಳ ಮೇಲೆ ಮುಖ್ಯಮಂತ್ರಿಗಳ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ಒತ್ತಾಯಿಸುವ ಅಗತ್ಯ ನಮಗಿಲ್ಲ ಎಂದು ತಿಳಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರು ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ತಮಗೆ ವಹಿಸಿರುವ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವ್ಯಸ್ತರಾಗಿದ್ದಾರೆ ಎಂದ ಅವರು, ಎಡಿಎಂಕೆ ಕಾರ್ಯಕರ್ತರ ಸೋಗಿನಲ್ಲಿದ್ದ ಕೆಲವರು ತಿರುವಳ್ಳೂರು-ತಿರುತ್ತಣಿ ರಸ್ತೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ‘ಅಮ್ಮಾ ’ಸ್ಟಿಕ್ಕರ್‌ಗಳನ್ನು ಮತ್ತು ಬ್ಯಾನರ್‌ಗಳನ್ನು ಹಚ್ಚುವಂತೆ ಒತ್ತಾಯಿಸಿದ್ದರೆಂಬ ವರದಿಯಿದೆ ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿಯ ಆರೋಪಗಳ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರು ಅಗ್ಗದ ಪ್ರಚಾರಕ್ಕಾಗಿ ಪರಿಹಾರ ಸಾಮಗ್ರಿಗಳ ಮೇಲೆ ಅಮ್ಮಾ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಪರಿಹಾರ ಕಾರ್ಯಾಚರಣೆಗೆ ಗಂಟೆಗಟ್ಟಲೆ ವಿಳಂಬವನ್ನುಂಟು ಮಾಡಿರುವುದಕ್ಕಾಗಿ ಎಡಿಎಂಕೆಯನ್ನು ತರಾಟೆಗೆತ್ತಿಕೊಂಡಿದ್ದಾರೆ.

Write A Comment