ಕನ್ನಡ ವಾರ್ತೆಗಳು

9 ತಿಂಗಳ ಬಳಿಕ ಬಯಲಾದ ಅತ್ಯಾಚಾರ ಪ್ರಕರಣ : ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ : ಆರೋಪಿ ನಾಪತ್ತೆ

Pinterest LinkedIn Tumblr

ವಿಟ್ಲ, ಡಿ.6: ವಿಟ್ಲ ಠಾಣಾ ವ್ಯಾಪ್ತಿಯ ವೀರಕಂಬ ಎಂಬಲ್ಲಿ ಯುವತಿಯೋರ್ವಳಿಗೆ ಆಮಿಷ ತೋರಿ ಅತ್ಯಾಚಾರ ಎಸಗಿದ ಯುವಕನೋರ್ವ ಬಳಿಕ ನಾಪತ್ತೆಯಾಗಿದ್ದು, ಇದೀಗ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ವೀರಕಂಬ ಗ್ರಾಮದ 28 ವರ್ಷ ಪ್ರಾಯದ ಅವಿವಾಹಿತ ಯುವತಿ ಕಲ್ಲಡ್ಕದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪ್ರವೀಣ್ ಎಂಬ ಯುವಕನ ಪರಿಚಯವಾಗಿತ್ತು. ಈ ಸಂದರ್ಭ ಯುವತಿಯೊಂದಿಗೆ ಸಲುಗೆ ಬೆಳೆಸಿದ ಪ್ರವೀಣ್ ಹಣ ಹಾಗೂ ಬಂಗಾರದ ಆಮಿಷ ತೋರಿ ಬೆಳ್ತಂಗಡಿಯ ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಕೃತ್ಯದ ಬಳಿಕ ಪ್ರವೀಣ್ ಯುವತಿಗೆ 100ರೂ. ನೀಡಿ ಕೃತ್ಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿರುತ್ತಾನೆ. ಬಳಿಕ ಯುವಕನ ಇರುವಿಕೆ ಬಗ್ಗೆ ತೀವ್ರ ಹುಡುಕಾಟ ನಡೆಸಿದ ಯುವತಿ ಆತ ಸಿಗದೆ ಇದೀಗ 9 ತಿಂಗಳ ಬಳಿಕ ಘಟನೆಯನ್ನು ಮನೆ ಮಂದಿಗೆ ವಿವರಿಸಿದ್ದಾಳೆ.

ಶುಕ್ರವಾರ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂದರ್ಭ ಘಟನೆಯು ಸಂಪೂರ್ಣವಾಗಿ ಬೆಳಕಿಗೆ ಬಂದಿದೆ. ಇದೀಗ ಯುವತಿ ನಡೆದ ಘಟನೆಯನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದು, ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿ ಪ್ರವೀಣ್‌ಗಾಗಿ ಬಲೆ ಬೀಸಿದ್ದಾರೆ.

Write A Comment