ಕನ್ನಡ ವಾರ್ತೆಗಳು

ಈ ಬಾರಿ ಮೀಲಾದುನ್ನಬಿ ಮೆರವಣಿಗೆಯಲ್ಲಿ ವಾಹನ ಜಾಥಾಕ್ಕೆ ಅವಕಾಶವಿಲ್ಲ : ಡಿ.ಸಿ

Pinterest LinkedIn Tumblr

Shanti_Sowhrdha_Meet

ಮಂಗಳೂರು, ಡಿ.6: ಈ ತಿಂಗಳಲ್ಲಿ ನಡೆಯಲಿರುವ ಮುಸ್ಲಿಮರ ಪ್ರಮುಖ ಹಬ್ಬವಾದ ಮೀಲಾದುನ್ನಬಿ ಆಚರಣೆ ವೇಳೆ ನಡೆಸಲಾಗುವ ಮೆರವಣಿಗೆಯಲ್ಲಿ ವಾಹನ ಜಾಥಾವನ್ನು ಕೈಬಿಟ್ಟು ಕಾಲ್ನಡಿಗೆ ಜಾಥಾಕ್ಕೆ ಸೀಮಿತಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.

ಮೀಲಾದುನ್ನಬಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸೌಹಾರ್ದ ಸಭೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳ ನಾಯಕರ ಸಲಹೆ, ಅಭಿಪ್ರಾಯಗಳ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದರು.

ಮೆರವಣಿಗೆಯ ಸಂದರ್ಭ ನಡೆಯುವ ವಾಹನಗಳ ಜಾಥಾದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಹಾಗೂ ಮೋಟಾರು ಕಾಯ್ದೆಯ ಉಲ್ಲಂಘನೆಯಾಗುತ್ತಿರುವ ಬಗ್ಗೆ ಈ ಹಿಂದಿನ ಮೆರವಣಿಗಳಿಂದ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ವಾಹನ ಜಾಥಾಕ್ಕೆ ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗದು. ಇದರ ಪ್ರಾರಂಭಿಕ ಹಂತವಾಗಿ ಈ ತಿಂಗಳಲ್ಲಿ ನಡೆಯಲಿರುವ ಮೀಲಾದುನ್ನಬಿ ಸಂದರ್ಭ ರಸ್ತೆಯಲ್ಲಿ ವಾಹನಗಳ ಓಡಾಟ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಆಯಾ ಜಮಾ ಅತ್ ವ್ಯಾಪ್ತಿಯೊಳಗೆ ಕಾಲ್ನಡಿಗೆ ಜಾಥಾಕ್ಕೆ ಮೆರವಣಿಗೆಯನ್ನು ಸೀಮಿತಗೊಳಿಸಬೇಕು ಹಾಗೂ ಕಾಲ್ನಡಿಗೆ ಜಾಥಾ ವೇಳೆ ಒಂದು ಮೈಕ್ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯ ಆರಂಭದಲ್ಲಿ ಈ ಹಿಂದಿನ ಮೆರವ ಣಿಗೆಯ ಸಂದರ್ಭ ನಡೆದಿರುವ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯ ಬಗ್ಗೆ ಭಾವಚಿತ್ರ ಗಳ ಮೂಲಕ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಮೋಟಾರು ವಾಹನ ಕಾಯ್ದೆಯಡಿ ಮೆರವಣಿಗೆ ಯಲ್ಲಿ ಪೂರ್ವಾನುಮತಿ ಇಲ್ಲದೆ ಬ್ಯಾನರ್ ಕಟೌಟ್ ಅಳವಡಿಸಲು ಅವಕಾಶವಿಲ್ಲ. ಚಲಿಸುವ ವಾಹನಗಳಲ್ಲಿ ಮೈಕ್ ಅಳವಡಿಸುವುದು, ಲಾರಿ ಹಾಗೂ ಪಿಕಪ್‌ಗಳಲ್ಲಿ ಜನರ ಸಾಗಾಟ, ಆಟೊ ರಿಕ್ಷಾ, ಬೈಕ್‌ಗಳಲ್ಲಿ ನಿಗದಿಗಿಂತ ಹೆಚ್ಚಿನವರ ಪ್ರಯಾಣ, ಹೆಲ್ಮಟ್ ಇಲ್ಲದೆ ಭಾಗವಹಿಸುವುದು, ಮೆರವಣಿಗೆಯ ವೇಳೆ ನಿರಂತರ ಹಾರ್ನ್ ಹಾಕುವುದು, ಸಾರ್ವಜನಿಕ ರಸ್ತೆಯಲ್ಲಿ ಜನರ ಮುಕ್ತ ಸಂಚಾರಕ್ಕೆ ಅವಕಾಶವಿಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿ ರುವುದು ಕಂಡು ಬಂದಿದೆ.

ಮಾತ್ರವಲ್ಲದೆ ಪೊಲೀಸ್‌ಹಾಗೂ ಮಿಲಿಟರಿ ಇಲಾಖೆಯ ಸಿಬ್ಬಂದಿ ತೊಡುವ ಸಮವಸ್ತ್ರ ತೊಟ್ಟು ಮೆರವಣಿಗೆ ನಡೆಸುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಅಶಾಂತಿಗೆ ಕಾರಣವಾಗುವ ಪ್ರಕ್ರಿಯೆಗಳಿಗೆ ನಿಯಂತ್ರಣ ಹೇರುವ ದಿಸೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಮೆರವಣಿಗೆಯನ್ನು ಶಿಸ್ತುಬದ್ಧವಾಗಿಸಲು ಜಿಲ್ಲಾಡಳಿತ ಚಿಂತಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಮೀಲಾದುನ್ನಬಿ ಪ್ರಯುಕ್ತ ನಡೆಸುವ ಮೆರವಣಿಗೆ ಕಾನೂನು ರೀತಿಯಲ್ಲಿ ನಡೆಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು. ಪುತ್ತೂರಿನಲ್ಲಿ ಈಗಾಗಲೇ ಮೀಲಾದುನ್ನಬಿ ಪ್ರಯುಕ್ತ ವಾಹನ ರ್ಯಾಲಿ ರದ್ದುಪಡಿಸಲಾಗಿದೆ ಎಂದು ಅಶ್ರಫ್ ಕಲ್ಲೇಗ ತಿಳಿಸಿದರೆ,

ಶಾಂತಿಯುತ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಮಾಜಿ ಮೇಯರ್ ಅಶ್ರಫ್ ಆಗ್ರಹಿಸಿದರು. ಕೋಮು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲಿ ಅಹಿತಕರ ಘಟನೆಗಳನ್ನು ತಪ್ಪಿಸಬಹುದು ಎಂದು ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಅಭಿಪ್ರಾಯಿಸಿದರು. ಮೆರವಣಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸಾಧ್ಯವಿಲ್ಲವಾಗಿದ್ದು, ಸ್ವಯಂ ಪ್ರೇರಿತವಾಗಿ ನಿಲ್ಲಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಹೇಳಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜೆಡಿಎಸ್ ರಾಜ್ಯ ಪದಾಧಿಕಾರಿ ಇಕ್ಬಾಲ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್, ಅಖಿಲ ಭಾರತ ಬ್ಯಾರಿ ಪರಿಷತ್‌ನ ಹಮೀದ್ ಕುದ್ರೋಳಿ, ಬಿ.ಎಸ್.ಹಸನಬ್ಬ, ಉಮರ್ ಯು.ಎಚ್., ಡಿ.ಎಂ.ಅಸ್ಲಂ, ಖಾದರ್ ಪುತ್ತೂರು, ಉಮರ್ ಕುಂಞಿ ಮುಸ್ಲಿಯಾರ್ ಬೆಳ್ತಂಗಡಿ, ಎಸ್. ಅಬ್ಬಾಸ್, ಮುಸ್ತಫಾ ಉಪ್ಪಿನಂಗಡಿ, ನೂರುದ್ದೀನ್ ಸಾಲ್ಮರ, ವಸಂತ ಆಚಾರಿ, ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಞಿ ಗೂನಡ್ಕ, ಸುನೀಲ್ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಡಿಸಿಪಿ ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

ಇಲಾಖೆ ಜೊತೆ ಸಹಕರಿಸಿ : ಎಸ್ಪಿ

ಸಮಾಜದಲ್ಲಿ ಆಡಳಿತ ವ್ಯವಸ್ಥೆ ಒಂದು ಭಾಗ ಮಾತ್ರ ಆಗಿದ್ದು, ಬದಲಾವಣೆಯ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯ. ಆ ಬದಲಾವಣೆ ಮುಂದಿನ ಹಬ್ಬದಿಂದಲೇ ಆರಂಭಗೊಳ್ಳಲಿ ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾನೂನು ರೀತಿಯ ಕ್ರಮಗಳಿಗೆ ಮುಂದಾಗಿದ್ದು, ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ.

ಈ ಕ್ರಮಗಳು ಮುಂಬರುವ ಎಲ್ಲಾ ರೀತಿಯ ಹಬ್ಬ, ಆಚರಣೆ, ಕಾರ್ಯಕ್ರಮಗಳಿಗೂ ಅನ್ವಯವಾಗಲಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಸಭೆಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಗೂಂಡಾ ಕಾಯ್ದೆ ಜಾರಿಗೊಳಿಸಲು ಕೆಲವರನ್ನು ಗುರುತಿಸಲಾಗಿದೆ ಎಂದವರು ಹೇಳಿದರು.

Write A Comment