ಕನ್ನಡ ವಾರ್ತೆಗಳು

ಮೀನಿನಲ್ಲಿ ಆಂಟಿಬಯಟಿಕ್ ಮತ್ತು ಕೀಟನಾಶಕಗಳ ಶೇಷವನ್ನು ಪತ್ತೆಹಚ್ಚುವ ಸರಳ ಹಾಗೂ ಶೀಘ್ರ ಸಾದನ

Pinterest LinkedIn Tumblr

Fish-_ancti_batic_solution

ಮಂಗಳೂರು,ಡಿ.04: ಮಂಗಳೂರಿನ ಮೀನುಗಾರಿಕಾ ಕಾಲೇಜು ಮೀನು ಹಾಗೂ ಸೀಗಡಿಗಳಲ್ಲಿ ಆಂಟಿಬಯಟಿಕ್ ಹಾಗೂ ಕೀಟ ನಾಶಕ ಗಳ ಶೇಷವನ್ನು ((Residue) ಕ್ಷೇತ್ರದಲ್ಲೇ ಶೀಘ್ರವಾಗಿ ಪತ್ತೆಹಚ್ಚುವ ಸರಳವಾದ ಮೊನೊಕ್ಲೋನಲ್ ಆಂಟಿಬಾಡಿ (Mb’s) ಆಧಾರಿತ ಸರಳ ಸಾದನವನ್ನು ಅಭಿವೃದ್ಧಿ ಪಡಿಸಿದೆ. ಆಕ್ಸಿಟೆಟ್ರಾಸೈಕ್ಲಿನ್ (Oxytetracycline),ಸಲ್ಫಾಡೈಮಿಥಾಕ್ಸಿನ್ (Sulphadimetoxine) ಎಂಬ ಆಂಟಿಬಯಟಿಕ್ ಹಾಗೂ ಕ್ಲೋರೋಫೈರಿಫೋಸ್ (Chlorpyriphos) ಎಂಬ ಕೀಟನಾಶಕವು ಮಾನವನ ವಿವಿಧ ಚಟುವಟಿಕೆ ಗಳಾದ ಕೃಷಿ, ಪಶುಸಂಗೋಪನೆ ಹಾಗೂ ಜಲಕೃಷಿಯಿಂದಾಗಿ ನೀರನ್ನು ಸೇರುತ್ತವೆ.

ಈ ಆಂಟಿಬಯಟಿಕ್ ಹಾಗೂ ಕೀಟನಾಶಕಗಳ ಶೇಷವು ನೀರಿನಿಂದ ಮೀನು ಹಾಗೂ ಸೀಗಡಿಯಲ್ಲಿ ಶೇಖರಣೆಗೊಂಡು ಇವನ್ನು ಸೇವಿಸುವ ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದರಿಂದ ಇವುಗಳನ್ನು ಅತೀ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಈ ಶೇಷಗಳನ್ನು ಪತ್ತೆ ಹಚ್ಚುವ ಉಪಕರಣಗಳು ಪ್ರಯೋಗಾಲಯಗಳಲ್ಲಿ ಇದ್ದರೂ ಸಹ ಅವು ತುಂಬಾ ದುಬಾರಿ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ದಿಸೆಯಲ್ಲಿ ಇನ್ನು ಹಲವು ಇಮ್ಯೂನೋ ವಿಶೇಷಣೆಗಳು ((Immuno assay) ಲಭ್ಯವಿದ್ದರೂ ಅವುಗಳನ್ನು ಆಮದು ಮಾಡಿಕೊಳ್ಳುವುದರಿಂದ ಪರೀಕ್ಷೆಯು ತುಂಬಾ ದುಬಾರಿ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಮೀನು ಹಾಗೂ ಸೀಡಗಿಯಲ್ಲಿರುವ ಈ ಶೇಷಗಳನ್ನು ಪತ್ತೆಹಚ್ಚುವ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಸಾದನಗಳ ಅತೀ ಅವಶ್ಯಕತೆಯಿತ್ತು.

ಮಂಗಳೂರಿನ ಮೀನುಗಾರಿಕಾ ಕಾಲೇಜು, ಹೈಬ್ರಿಡೋಮ ತಾಂತ್ರಿಕತೆಯಿಂದ ಈ ಶೇಷಗಳ ವಿರುದ್ಧವಾಗಿ ಮೋನೋಕ್ಲೋನಲ್ ಆಂಟಿಬಾಡಿಗಳನ್ನು ತಯಾರಿಸಿದೆ. ಈ ಮೋನೋಕ್ಲೋನಲ್ ಆಂಟಿಬಾಡಿಗಳನ್ನು ಫ್ಲೋತ್ರೂ ಎಸ್ಸೆ (Flowthrough assay)ಯಲ್ಲಿ ಬಳಸಿ ಸರಳವಾದ ಕ್ಷೇತ್ರದಲ್ಲೇ ಕಂಡುಹಿಡಿಹುವ ಸಾದನಗಳನ್ನು ಅಭಿವೃದ್ಧಿ ಪಡಿಸಿದೆ. ಈ ಮೋನೋಕ್ಲೋನಲ್ ಆಂಟಿಬಾಡಿ ಆಧಾರಿತ ಪರೀಕ್ಷೆಯು ಕಡಿಮೆ ವೆಚ್ಚದ್ದಾಗಿದ್ದು ಯಾವುದೇ ಇತರ ಉಪಕರಣಗಳು ಬೇಕಾಗದೇ ಕ್ಷೇತ್ರದಲ್ಲೇ ಪತ್ತೆಹಚ್ಚಬಹುದು. ಈ ಸರಳ ಸಾದನದಿಂದ ಹೆಚ್ಚು ಮೀನು ಮತ್ತು ಸೀಗಡಿ ಮಾದರಿಗಳನ್ನು (sample) ಕಡಿಮೆ ಸಮಯದಲ್ಲಿ ಪರೀಕ್ಷಿಸಿ ಶೇಷಗಳ ನಿರ್ವಹಣೆಗೆ ಸಹಾಯವಾಗುತ್ತದೆ. ಈ ಸಾದನಗಳಿಂದ ಕೇವಲ ೫ ನಿಮಿಷದಲ್ಲೇ ಕ್ಷಿಪ್ರವಾಗಿ ಕನಿಷ್ಠ ಅನುಮತಿ ಮಟ್ಟಕ್ಕಿಂತ ಕೆಳಗಿರುವ ಶೇಷಗಳನ್ನು ಕಂಡುಹಿಡಿಯಬಹುದು.

ಈ ಸಾದನಗಳು ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ಮೀನು / ಸೀಗಡಿ ಸಂಸ್ಕರಣೆ ಕೈಗೊಳ್ಳುವವರಿಗೆ, ಸೀಗಡಿ ರಫ್ತುದಾರರಿಗೆ ಹಾಗೂ ಜಲಕೃಷಿಯಲ್ಲಿ ಆರೋಗ್ಯ ನಿರ್ವಹಣೆ ಮಾಡುವ ವಿಸ್ತರಣಾ ಕಾರ್ಯಕರ್ತರಿಗೆ ಬಹಳ ಉಪಯೋಗವಾಗಲಿದೆ. ಈ ಹಿಂದೆ ಮೀನುಗಾರಿಕಾ ಕಾಲೇಜು ಇದೇ ತರಹದ ಮೊನೋಕ್ಲೋನಲ್ ಆದಾರಿತ ಸಾದನವನ್ನು ರೇತರೇ ಸೀಗಡಿಯಲ್ಲಿ ವೈರಸ್ ಬಿಳಿ ಚುಕ್ಕೆ ರೋಗವನ್ನು ಕಂಡುಹಿಡಿಯುವುದಕ್ಕೆ ಅಭಿವೃದ್ಧಿ ಪಡಿಸಿ ಮುಂಬೈನ ವರ್‌ಬ್ಯಾಕ್ ಪಶು ಆರೋಗ್ಯರಕ್ಷಣಾ ಸಂಸ್ಥೆಯ ಮುಖಾಂತರ ವಾಣಿಜ್ಯಕರಿಸಲಾಗಿದೆ.

ಈ ಸಾದನಗಳನ್ನು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಕೆ. ಎಂ. ಶಂಕರ್, ಡಾ. ಬಿ. ಎ. ಶ್ಯಾಮಸುಂದರ್ ಮತ್ತು ಅವರ ವಿದ್ಯಾರ್ಥಿಗಳು ನವದೆಹಲಿಯ ಬಯೋಟೆಕ್ನಾಲಜಿ ಸಂಸ್ಥೆ ಮತ್ತು ಯರೋಪಿಯನ್ ಯೂನಿಯನ್, ಬೃಸಲ್ಸ್‌ನ ಅನುದಾನದಿಂದ ಅಭಿವೃಧ್ಧಿಪಡಿಸಿದ್ದಾರೆ.

Write A Comment