ಕನ್ನಡ ವಾರ್ತೆಗಳು

ಮುಕ್ತಾಯ ಕಾಣದ ಪುರಭವನ ಕಾಮಗಾರಿ: ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಿಗೆ ನಿರಾಶೆ

Pinterest LinkedIn Tumblr

townhall_recontrct_news_1

ಮಂಗಳೂರು, ಡಿ. 04 : ನಗರದ ಪ್ರಮುಖ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ವೇದಿಕೆಯಾಗಿ ಗುರುತಿಸಿಕೊಂಡಿರುವ ಪುರಭವನ ಇದೀಗ ನವೀಕರಣಗೊಂಡು ಉದ್ಘಾಟನೆಗೊಂಡಿದ್ದರೂ, ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ಮತ್ತೂ ಒಂದು ವಾರ ವಿಳಂಬಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. 4.58 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಗೊಂಡಿರುವ ಪುರಭವನ ಡಿಸೆಂಬರ್ ಮೊದಲ ವಾರದಿಂದ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಆದರೆ ಇನ್ನೂ ಕೆಲವು ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಾಗೂ ಪುರಭವನದ ಬಾಡಿಗೆ ದರ ಪರಿಷ್ಕರಣೆ ಅಧಿಕೃತವಾಗಿ ಪ್ರಕಟವಾಗದ ಕಾರಣ ಜನವರಿಯಲ್ಲಿ ಕಾರ್ಯಕ್ರಮಕ್ಕೆ ಮುಂದಾಗುವವರಿಗೂ ಬುಕ್ಕಿಂಗ್ ದೃಢೀಕರಿಸಲಾಗುತ್ತಿಲ್ಲ.

ನವೀಕರಣದ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ವರ್ಷ ಕಾಲ ಪುರಭವನ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಕಲಾವಿದರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪುರಭವನದ ನವೀಕರಣ ಕಾಮಗಾರಿ ವಿಳಂಬದ ಬಗ್ಗೆ ಮನಪಾ ಸಾಮಾನ್ಯ ಸಭೆಯಲ್ಲೂ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ, ಅಧಿಕಾರಿಗಳನ್ನು ತರಾಟೆಗೈಯ್ಯುವ ಪ್ರಕ್ರಿಯೆಯೂ ನಡೆದಿತ್ತು. ಅಂತೂ, ನವೆಂಬರ್‌ನಲ್ಲಿ ಪುರಭವನ ಉದ್ಘಾಟನೆಗೊಂಡು, ಡಿಸೆಂಬರ್‌ನಿಂದ ಪುರಭವನದಲ್ಲಿ ಕಾರ್ಯಕ್ರಮಗಳು ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಿಗೆ ಸದ್ಯ ನಿರಾಶೆಯಾಗಿದೆ.

ಕಾರ್ಯಕ್ರಮಗಳ ನಡೆಸುವವರು ಪುರಭವನದ ಬುಕ್ಕಿಂಗ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದು, ಜನವರಿ ತಿಂಗಳ ಕಾರ್ಯಕ್ರಮಕ್ಕೂ ಬುಕ್ಕಿಂಗ್ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ‘ಪುರಭವನದಲ್ಲಿ ಕೆಲವೊಂದು ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಇದೆ. ಡಿ.10ರಂದು ಅಧಿಕೃತವಾಗಿ ಪುರಭವನವನ್ನು ಮನಪಾಕ್ಕೆ ಹಸ್ತಾಂತರ ಮಾಡುವೆವು’ ಎಂದು ಕಾಮಗಾರಿಯ ಗುತ್ತಿಗೆದಾರರು ತಿಳಿಸಿದ್ದಾರೆ. ‘ನವೆಂಬರ್‌ನಲ್ಲೇ ಕಾಮಗಾರಿ ಕೊನೆಗೊಂಡು ಡಿಸೆಂಬರ್ ಪ್ರಥಮ ವಾರದಿಂದಲೇ ಕಾರ್ಯಕ್ರಮಗಳಿಗೆ ಅವಕಾಶ ನೀಡಲು ಯೋಜಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತಿಲ್ಲ. ಕಾರ್ಯಕ್ರಮಕ್ಕೆ ಅವಕಾಶ ಕೋರಿ ನೀಡಲಾಗುವ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ’ ಎಂದು ಮನಪಾ ಉಪ ಆಯುಕ್ತ (ಕಂದಾಯ) ರಾಜು ಮೊಗವೀರ ಪತ್ರಿಕೆಗೆ ತಿಳಿಸಿದ್ದಾರೆ.

‘ಬುಕ್ಕಿಂಗ್ ಆಗದೆ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗುತ್ತಿಲ್ಲ’
ಜನವರಿ 10 ರಂದು ನಮ್ಮ ವಿದ್ಯಾರ್ಥಿಯೊಬ್ಬರ ನೃತ್ಯ ಕಾರ್ಯಕ್ರಮವಿದ್ದು, ಅದಕ್ಕಾಗಿ ಪುರಭವನ ಬುಕ್ಕಿಂಗ್‌ಗಾಗಿ ಎರಡೆರಡು ಬಾರಿ ಸಂಪರ್ಕಿಸಲಾಗಿದೆ. ಆದರೆ, ಕಾಮಗಾರಿ ಇನ್ನೂ ನಡೆಯುತ್ತಿದ್ದು, ಬುಕ್ಕಿಂಗ್ ಪಡೆಯಲಾಗದು ಎಂದು ಹೇಳಿದ್ದಾರೆ. ಡಿಸೆಂಬರ್‌ನಿಂದ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಇದೀಗ ಜನವರಿ ತಿಂಗಳ ಬುಕ್ಕಿಂಗ್ ಕೂಡಾ ಪಡೆಯದಿರುವುದರಿಂದ ನಾವು ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಯುವುದು ಹಾಗೂ ಆಹ್ವಾನ ಪತ್ರಿಕೆ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ.
ವಿದ್ವಾನ್ ಯು.ಕೆ. ಪ್ರವೀಣ್, ನಿರ್ದೇಶಕರು, ಕದ್ರಿ ನೃತ್ಯ ವಿದ್ಯಾನಿಲಯ.

ಮದುವೆ ಸಮಾರಂಭಕ್ಕೆ ಬಾಡಿಗೆ ದರ ದುಬಾರಿ!
ಪುರಭವನದಲ್ಲಿ ಹಿಂದೆ ಮದುವೆ ಸಮಾರಂಭಗಳಿಗೆ ದಿನವೊಂದಕ್ಕೆ 30,000 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ದರ 90,000 ರೂ.ಗಳು. ಊಟದ ವ್ಯವಸ್ಥೆಗಾಗಿ ಶಾಮಿಯಾನಕ್ಕೆ ಮತ್ತೆ 10,000 ರೂ. ಹಾಗೂ ಎಸಿ ಸೌಲಭ್ಯ ಬೇಕಿದ್ದಲ್ಲಿ ಹೆಚ್ಚುವರಿ ಅಂದಾಜು 50,000 ರೂ.ಗಳಷ್ಟು ನೀಡಬೇಕಾಗುತ್ತದೆ. ಟಿಕೆಟ್ ರಹಿತ ಯಕ್ಷಗಾನ ಹಾಗೂ ನಾಟಕ ಕಾರ್ಯಕ್ರಮಕ್ಕೆ ತಲಾ 10,000 ರೂ. ಬಾಡಿಗೆ ದರ ನಿಗದಿಪಡಿಸಲಾಗಿದ್ದು, ಟಿಕೆಟ್‌ನ ನಾಟಕ ಹಾಗೂ ಯಕ್ಷಗಾನ ಕಾರ್ಯಕ್ರಮಕ್ಕೆ ತಲಾ 20,000 ರೂ. ದರ ಪ್ರಾಸ್ತಾವಿಸಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ತಿಳಿಸಿದ್ದಾರೆ. ದರ ಪರಿಷ್ಕರಣೆ ಚುನಾವಣೆ ಘೋಷಣೆ ಆಗುವ ಮೊದಲೇ ನಿಗದಿಪಡಿಸಲಾಗಿತ್ತು. ಆದರೆ ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸಭೆಯಲ್ಲಿ ಮಂಡಿಸಲು ನೀತಿ ಸಂಹಿತೆ ಜಾರಿಯಾದ ಕಾರಣ ಸಾಧ್ಯವಾಗಿಲ್ಲ. ಕೆಲವೊಂದು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ವಿಳಂಬವಾಗಿದೆ. ಡಿಸೆಂಬರ್ 1ರಿಂದ ಬುಕ್ಕಿಂಗ್ ಪಡೆಯಲಾಗುತ್ತಿದ್ದು, 10ರ ಬಳಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದು ಹರಿನಾಥ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘ಕಾರ್ಯಕ್ರಮಗಳಿಗೆ ಶೀಘ್ರ ಅವಕಾಶ’
ಪುರಭವನವು ಇದೀಗ ಎಸಿ, ಸೌಂಡ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿದೆ. ಪುರಭವನದಲ್ಲಿ ಪ್ರಸ್ತುತ ಕಲ್ಪಿಸಲಾಗಿರುವ ಆಧುನಿಕ ಸೌಲಭ್ಯಗಳು ಹಾಗೂ ಬೆಂಗಳೂರಿನ ಪುರಭವನದ ಬಾಡಿಗೆ ದರವನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮಂಗಳೂರು ಪುರಭವನದ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ಶೀಘ್ರದಲ್ಲೇ ಪುರಭವನದಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು. ಡಾ. ಗೋಪಾಲಕೃಷ್ಣ, ಆಯುಕ್ತರು, ಮನಪಾ.

Write A Comment