ಕನ್ನಡ ವಾರ್ತೆಗಳು

ಚೆನ್ನೈ ಮಹಾಮಳೆ : ಸಂಕಷ್ಟದಲ್ಲಿ ಸಿಲುಕಿದ ಕರಾವಳಿಗರು

Pinterest LinkedIn Tumblr

chenai_rain_vittalppl

ಮಂಗಳೂರು ಡಿ.04 : ಭಾರೀ ಮಳೆಯಿಂದ ತತ್ತರಿಸಿರುವ ಚೆನ್ನೈಯಲ್ಲಿ ಕರಾವಳಿಗರು ಕೂಡಾ ಸಿಲುಕಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಚೆನ್ನೈಯ ಸಿ.ಎಂ.ಬಿ.ಟಿ. ಬಸ್ ನಿಲ್ದಾಣ ಬಳಿಯ ಚೂಳೈಮೇಡು ಎಂಬಲ್ಲಿ ವಾಸಿಸುತ್ತಿರುವ 9 ಮಂದಿ ಸದಸ್ಯರಿರುವ ವಿಟ್ಲದ ಕುಟುಂಬವೊಂದು ಅತಿವೃಷ್ಟಿಗೆ ಸಿಲುಕಿ ಸಂಕಷ್ಟಕ್ಕೊಳಗಾಗಿದೆ.

ವಿಟ್ಲ ಅಡ್ಡದಬೀದಿಯ ರತ್ನಾಕರ ಜೋಷಿ ಎಂಬವರ ಈ ಕುಟುಂಬದಲ್ಲಿ ಮೂರು ದಂಪತಿ, ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯಿದ್ದಾರೆ. ಈ ಅವಿಭಕ್ತ ಕುಟುಂಬ ಕಳೆದ ಹಲವು ವರ್ಷಗಳಿಂದ ಚೂಳೈಮೇಡುವಿನಲ್ಲಿ ಸ್ವಂತ ಮನೆ ನಿರ್ಮಿಸಿ ವಾಸವಾಗಿದೆ. ರತ್ನಾಕರ ಜೋಷಿ, ಅವರ ಪತ್ನಿ ವಿಜಯಾ, ಹಿರಿಯ ಪುತ್ರ ಸುರೇಶ, ಅವರ ಪತ್ನಿ ಮೂಲತಃ ಉಡುಪಿಯ ವಾಣಿ, ಪುಟಾಣಿ ಮಕ್ಕಳಾದ ದುರ್ಗೇಶ್, ನವ್ಯಾ, ರತ್ನಾಕರ ಅವರ ಕಿರಿಯ ಪುತ್ರ ಚೆನ್ನೈಯಲ್ಲಿ ಎಂಜಿನಿಯರ್ ಆಗಿರುವ ಹರೀಶ್, ಅವರ ಪತ್ನಿ ಚೆನ್ನೈ ಆಲ್ ಇಂಡಿಯಾ ರೇಡಿಯೊ ಎಫ್.ಎಂನಲ್ಲಿ ವೃತ್ತಿಯಲ್ಲಿರುವ ಅಪರ್ಣಾ ಹಾಗೂ ಪುತ್ರ ಎಲ್.ಅನೀಶ್ ಚೆನ್ನೈಯಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಅಪರ್ಣಾ ವಿಟ್ಲ ಪಳಿಕೆ ನಿವಾಸಿ ಸಾಹಿತಿ ಶಂಕರ ಕುಳಮರ್ವ ಹಾಗೂ ವಿಟ್ಲ ಗ್ರಾಪಂ ಮಾಜಿ ಉಪಾಧ್ಯಕ್ಷೆ ಶಾಂತಾ ಎಸ್.ಎನ್.ಭಟ್ ದಂಪತಿಯ ಪುತ್ರಿ.

ಇವರು ವಾಸವಾಗಿರುವ ಮನೆಯ ನೆಲಮಹಡಿ ಸಂಪೂರ್ಣ ಜಲಾವೃತ ಗೊಂಡಿದ್ದು, ಮನೆಮಂದಿ ಕಳೆದ 3-4 ದಿನಗಳಿಂದ ಮೇಲಿನ ಮಹಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿ ಇವರ ಮನೆಗೆ 2 ಬಾರಿ ಮಳೆನೀರು ನುಗ್ಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆ ಕಾರಣ ಮನೆಯ ಅಂಗಳದಲ್ಲಿರುವ ಕಾರು, ಬೈಕ್‌ಗಳು ಸಂಪೂರ್ಣ ಮುಳುಗಿಹೋಗಿವೆ. ವಿದ್ಯುತ್ ಸರಬರಾಜಿಲ್ಲದ ಕಾರಣ ಕತ್ತಲೆಯಲ್ಲೇ ಕಳೆಯುವಂತಾಗಿದೆ. ಮೊಬೈಲ್ ಫೋನ್ ನೆಟ್‌ವರ್ಕ್ ಕೂಡಾ ಸ್ಥಗಿತ ಗೊಂಡಿದೆ. ಆಹಾರ, ಕುಡಿಯುವ ನೀರು ಮೊದಲಾದ ಮೂಲಭೂತ ಸಾಮಗ್ರಿಗಳಿಗೂ ತತ್ವಾರ ಉಂಟಾಗಿದೆ ಎಂದು ವಿಟ್ಲದಲ್ಲಿರುವ ಅಪರ್ಣಾ ಮನೆಮಂದಿ ತಿಳಿಸಿದ್ದಾರೆ.

ಮನೆಯಲ್ಲಿ ಶೇಖರಿಸಿಟ್ಟರುವ ಅಲ್ಪ ಸ್ವಲ್ಪಬೇಳೆಕಾಳುಗಳೇ ಇದೀಗ ಹಸಿವು ಇಂಗಿಸಲು ನೆರವಾಗಿದೆ. ಮನೆ ಸುತ್ತಲೂ ನೀರು ತುಂಬಿ ದ್ವೀಪದಲ್ಲಿರುವ ಅನುಭವ. ಗುರುವಾರದಿಂದ ಆಗೊಮ್ಮೆ ಈಗೊಮ್ಮೆ ಸಿಗುವ ಮೊಬೈಲ್ ನೆಟ್‌ವರ್ಕ್ ಸಿಗಲಾರಂಭಿಸಿದೆ. ಗುರುವಾರ ಬೆಳಗ್ಗೆ ವಿಟ್ಲದಲ್ಲಿರುವ ತವರಿಗೆ ಮೊಬೈಲ್ ಫೋನ್ ಕರೆ ಮಾಡಿ ಒಂದರ್ಧ ನಿಮಿಷ ಅಮ್ಮನಲ್ಲಿ ಮಾತನಾಡಿ ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ.

ಕಳೆದೆರಡು ದಿನಗಳಿಂದ ವಿದ್ಯುತ್ ಸರಬರಾಜಿಲ್ಲದ ಕಾರಣ ಮೊಬೈಲ್ ಪೋನ್‌ಗಳಲ್ಲೂ ಬ್ಯಾಟರಿ ಮುಗಿಯುತ್ತಾ ಬಂದಿದೆ. ಹೀಗೆಯೇ ಮುಂದುವರಿದರೆ ಹೊರಗಿನವರ ಸಂಪರ್ಕ ಕಡಿದುಹೋಗುವ ಭೀತಿ ಯಲ್ಲಿ ರತ್ನಾಕರ ಜೋಷಿ ಕುಟುಂಬ ಕಾಲ ಕಳೆಯುವಂತಾಗಿದೆ. ಸದ್ಯ ಅಕ್ಷರಶಃ ಯಾರದೇ ಸಂಪರ್ಕವಿಲ್ಲದೆ ಮೋಡ ಕವಿದ ವಾತಾವರಣದಲ್ಲಿ ಭಯದೊಂದಿಗೆ ಜೀವಿಸಬೇಕಾದ ಅಸಹನೀಯ ಅನುಭವ ಈ ಕನ್ನಡಿಗ ಕುಟುಂಬದ್ದಾಗಿದ್ದು, ಮಳೆ ಇಳಿಮುಖವಾಗುವುದನ್ನೇ ಎದುರು ನೋಡುತ್ತಿದೆ.

ಸಂಕಷ್ಟದಲ್ಲಿ ಪೆರ್ಲದ ಅಮೀನ್
ಚೆನ್ನೈಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿರುವ ಪೆರ್ಲ ಸಮೀಪದ ಗೂಣಾಜೆ ನಿವಾಸಿ ಮೊಯ್ದು ಹಾಜಿ ಎಂಬವರ ಪುತ್ರ ಅಮೀನ್ ಮಾಳಿಗೆ ಮೇಲಿನ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಕೆಳಗಿ ಇಳಿಯಲು ನೀರು ಬಿಡುತ್ತಿಲ್ಲ. ಚೆನ್ನೈ ತೌಸೆಂಡ್ ಲೈಟ್, ವೌಂಟ್ ರೋಡ್‌ನ 2ನೆ ಮಹಡಿಯ ಕೋಣೆಯಲ್ಲಿರುವ ಅಮೀನ್‌ಗೆ ಆಹಾರಕ್ಕೆ ಸಮಸ್ಯೆ ಎದುರಾಗಿದೆ. ಸುತ್ತಮುತ್ತ ತೆರೆಯುವ ಒಂದೆರಡು ಹೋಟೆಲ್ಗಳು ತೆರೆದಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಪದಾರ್ಥಗಳಿಗೆ ದುಬಾರಿ ಬೆಲೆ. ಕುಂಭದ್ರೋಣ ಮಳೆ, ನೆರೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ.
ಅರ್ಧ ಲೀ. ಹಾಲಿಗೆ 100 ರೂ.!
ಹರೀಶ್ ಗುರುವಾರ ಬೆಳಗ್ಗೆ ಎಲ್ಲೆಡೆ ಆಳೆತ್ತರಕ್ಕೆ ತುಂಬಿ ನಿಂತಿರುವ ನೀರಲ್ಲಿ ಸುಮಾರು 1 ಕಿ.ಮೀ.ನಷ್ಟು ದೂರ ಭಾಗಶಃ ಈಜುತ್ತಲೇ ಅಂಗಡಿಗೆ ತೆರಳಿ ಹಾಲು ತಂದಿದ್ದಾರೆ. ಹಾಲಿಗಾಗಿ ಭಾರೀ ನೂಕುನುಗ್ಗಲಿದ್ದು, ಅರ್ಧ ಲೀಟರ್‌ನ ಒಂದು ಪ್ಯಾಕೆಟ್ ಹಾಲಿಗೆ ನೂರು ರೂ. ತೆತ್ತಿದ್ದಾರೆ. ಅದು ಕೂಡಾ ಸಿಗುವುದು ಅಪರೂಪ. ಈ ಎಲ್ಲ ಸಂಕಷ್ಟಗಳಿಂದ ಪಾರಾಗಿ ಊರು ಸೇರುವ ಇರಾದೆ ಇದ್ದರೂ ವಾಹನ, ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅದೂ ಸಾಧ್ಯವಾಗದೆ ಚಡಪಡಿಸುವಂತಾಗಿದೆ.

ವರದಿ ಕೃಪೆ :ವಾಭಾ

Write A Comment