ಮಂಗಳೂರು, ಡಿ.04: ಕ್ರೀಡಾ ಕೋಟಾದಡಿ ಸರಕಾರ 130 ಮಂದಿ ಕ್ರೀಡಾಪಟುಗಳನ್ನು ಅರಣ್ಯ ಇಲಾಖೆ ಹುದ್ದೆಗೆ ನೇಮಕ ಮಾಡಲಿದೆ. ಈ ಪೈಕಿ 77 ಮಂದಿಯ ನೇಮಕಾತಿ ನಡೆದಿದ್ದು, ಉಳಿದವರ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಅರಣ್ಯ ಇಲಾಖಾ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಶ್ರೀರಾಮಕೃಷ್ಣ ಪದವಿ ಪೂರ್ವ ಕಾಲೇಜು ಮತ್ತು ಪ.ಪೂ. ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ಮೂರು ದಿನಗಳ ಕಾಲ ನಡೆಯುವ ಪ.ಪೂ. ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟವನ್ನು ಉದ್ಘಾ ಟಿಸಿ ಮಾತನಾಡುತ್ತಿದ್ದರು.ದೈಹಿಕ ಆರೋಗ್ಯ, ಸಾಮಾಜಿಕ ಸಾಮರಸ್ಯ ಹಾಗೂ ಯುವಜನತೆ, ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಕ್ರೀಡೆ ಸಹಕಾರಿ ಎಂದರು.
ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳು ದೇಶಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡಿವೆ. ರಾಷ್ಟ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡಲು ದೈಹಿಕ ನಿರ್ದೇಶಕರು ಹೆಚ್ಚಿನ ಆಸಕ್ತಿ ತೋರಬೇಕೆಂದು ಕರೆ ನೀಡಿದರು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಪಾಲಿಕೆ ಸದಸ್ಯ ಅಶೋಕ್‌ಕುಮಾರ್ ಡಿ.ಕೆ., ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ, ರಾಮಕೃಷ್ಣ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ.ಕಿಶೋರ್‌ಕುಮಾರ್ ರೈ ಶೇಣಿ, ದೈಹಿಕ ಶಿಕ್ಷಣ ನಿರ್ದೇಶಕ ರಾಜ್‌ಕಿಶೋರ್ ಭಂಡಾರಿ, ಕಾಲೇಜು ಸಂಚಾಲಕ ಕೃಷ್ಣಪ್ರಸಾದ್ ರೈ ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್‌ಕುಮಾರ್ ರೈ ಮಾಲಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಕ್ರೀಡಾಪಟುಗಳಿಂದ ಸಚಿವ ಕೆ. ಅಭಯಚಂದ್ರ ಜೈನ್, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಪಾಲಿಕೆ ಸದಸ್ಯ ಅಶೋಕ್ ಕುಮಾರ್ ಡಿ.ಕೆ. ಗೌರವ ವಂದನೆ ಸ್ವೀಕರಿಸಿದರು. ಬಳಿಕ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಕ್ರೀಡಾಪಥ ಸಂಚಲನದಲ್ಲಿ 26 ಜಿಲ್ಲೆಗಳ 2,100 ಮಂದಿ ಪಾಲ್ಗೊಂಡರು. ಮೂರು ದಿನಗಳ ಕ್ರೀಡಾಕೂಟದಲ್ಲಿ ಒಟ್ಟು 31 ಜಿಲ್ಲೆಗಳಿಂದ 2,500 ಕ್ರೀಡಾಳು ಗಳು ಭಾಗವಹಿಸುತ್ತಿದ್ದಾರೆ.





















