ಕನ್ನಡ ವಾರ್ತೆಗಳು

ಶಿಕ್ಷಕಿಯ ಮೇಲೆ ಕತ್ತಿಯಿಂದ ಕಡಿದು ಹಲ್ಲೆ : ಸ್ವತಹ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ.

Pinterest LinkedIn Tumblr

Teacher_muder_attmpt_m

ಬೆಳ್ತಂಗಡಿ, ಡಿ.04 : ಧರ್ಮಸ್ಥಳ ಗ್ರಾಮದ ಮುಳಿಕಾರು ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ವ್ಯಕ್ತಿಯೋರ್ವ ಅಂಗನವಾಡಿ ಶಿಕ್ಷಕಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿ ತಾನು ಸ್ವತಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನೆರಿಯ ಗ್ರಾಮದ ನಿವಾಸಿ ಉಮೇಶ್ ಗೌಡ ಎಂಬವನಾಗಿದ್ದಾನೆ. ಅಂಗನವಾಡಿ ಶಿಕ್ಷಕಿ ಹೊನ್ನಮ್ಮ (37) ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ :

ಗುರುವಾರ ಸಂಜೆ 4:30 ರ ಸುಮಾರಿಗೆ ಮಕ್ಕಳನ್ನು ಮನೆಗೆ ಕಳುಹಿಸಿ ಶಿಕ್ಷಕಿ ದಾಖಲೆಗಳನ್ನು ಬರೆಯುತ್ತಿದ್ದರು. ಈ ವೇಳೆ ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ಬಂದ ಈತ ನೇರವಾಗಿ ಶಿಕ್ಷಕಿಯ ಮೇಲೆ ದಾಳಿ ನಡೆಸಿದ್ದಾನೆ. ಕತ್ತಿಯ ಹೊಡೆತವನ್ನು ಶಿಕ್ಷಕಿ ಹೊನ್ನಮ್ಮ ಕೈಯಿಂದ ತಡೆದು ಹೊರಗೆ ಓಡಿದ್ದಾರೆ. ಆಕೆ ತಪ್ಪಿಸಿಕೊಳ್ಳುತ್ತಿದ್ದಂತೆ ಉಮೇಶ್ ಗೌಡ ಅಲ್ಲಿಂದ ಹೊರಬಂದು ತನ್ನ ಬಳಿ ಇದ್ದ ನಾಡ ಬಂದೂಕಿನಿಂದ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಅಂಗನವಾಡಿಯ ಪಕ್ಕದಲ್ಲಿಯೇ ಮೃತ ಪಟ್ಟಿದ್ದಾನೆ. ಹೊರಗೆ ಓಡಿ ಬಂದ ಹೊನ್ನಮ್ಮ ಹತ್ತಿರದ ಮನೆಯವರಿಗೆ ಕರೆಮಾಡಿ ತಿಳಿಸಿದಾಗ ಸ್ಥಳೀಯರು ಓಡಿಬಂದು ನೋಡಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿದೆ.

Teacher_muder_attmpt_1

ವರ್ಷದ ಹಿಂದೆ ಉಮೇಶ್‌ಗೌಡ ಹೊನ್ನಮ್ಮಳನ್ನು ಮದುವೆಯಾಗುವ ಆಲೋಚನೆಯೊಂದಿಗೆ ಹೆಣ್ಣು ನೋಡಲು ಇವರ ಮನೆಗೆ ಬಂದಿದ್ದ. ಮೊದಲು ಮದುವೆಗೆ ಹೊನ್ನಮ್ಮ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಬಳಿಕ ಈತನ ಗುಣ ನಡತೆ ಸರಿಯಿಲ್ಲದಿರುವುದು ತಿಳಿದುಕೊಂಡ ಹೊನ್ನಮ್ಮ ಮದುವೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಕೋಪಗೊಂಡ ಉಮೇಶ್ ಕೆಲ ತಿಂಗಳುಗಳ ಹಿಂದೆ ಇದೇ ಅಂಗನವಾಡಿ ಕೇಂದ್ರಕ್ಕೆ ಬಂದು ಆಕೆಗೆ ಹಲ್ಲೆ ಮಾಡಲು ಮುಂದಾಗಿ ಬೆದರಿಕೆಯೊಡ್ಡಿದ್ದ. ಈ ಬಗ್ಗೆ ಹೊನ್ನಮ್ಮ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆತನನ್ನು ಕರೆಸಿ ಮುಚ್ಚಳಿಕೆ ಬರೆದು ಕಳಿಸಿದ್ದರು. ಕೆಲದಿನಗಳ ಹಿಂದೆಯೂ ಆತ ಹೊನ್ನಮ್ಮಳಿಗೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗುತ್ತಿದೆ.

ಉಮೇಶ್‌ಗೌಡ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು ಈ ಹಿಂದೆಯೇ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. 2013ರಲ್ಲಿ ಈತ ಮಹಿಳೆಯೋರ್ವರಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದಲಿತ ನಿಂದನೆ ಸೇರಿದಂತೆ ಕೊಲೆಬೆದರಿಕೆ ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಈತ ಕಾಡು ಪ್ರಾಣಿಯ ಹತ್ಯೆ ಮಾಡಿ ಮಾಂಸದೊಂದಿಗೆ ಬೆಳ್ತಂಗಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆತನ ಕೈಯಿಂದ ಅಕ್ರಮ ನಾಡ ಬಂದೂಕು ಪತ್ತೆಯಾಗಿತ್ತು. ಈ ಎರಡು ಪ್ರಕರಣಗಳೂ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿತ್ತು. ಈತನ ಮನೆ ನೆರಿಯ ಗ್ರಾಮದಲ್ಲಾಗಿದ್ದು ತಾಯಿ ಮಾತ್ರ ಇದ್ದಾಳೆ ಎನ್ನಲಾಗಿದೆ. ಈತ ಸುಮಾರು 20 ಕಿ.ಮೀ ದೂರದ ನೆರಿಯದಿಂದ ಬಂದೂಕಿನೊಂದಿಗೆ ನಡೆದುಕೊಂಡು ಧರ್ಮಸ್ಥಳದ ಮುಳಿಕಾರಿಗೆ ಬಂದು ಈ ಕೃತ್ಯವೆಸಗಿದ್ದಾನೆ ಎಂಬುದು ಮತ್ತೊಂದು ವಿಶೇಷ.

Teacher_muder_attmpt_3 Teacher_muder_attmpt_2 Teacher_muder_attmpt_4

ಈತನ ಬಳಿಯಿಂದ ಪೊಲೀಸರು ಒಂದು ನಾಡ ಬಂದೂಕನ್ನು ಈ ಹಿಂದೆಯೇ ವಶಪಡಿಸಿಕೊಂಡಿದ್ದರೂ ಮತ್ತೆ ಈತ ಹೇಗೆ ನಾಡ ಬಂದೂಕು ಪಡೆದಿದ್ದಾನೆ ಎಂಬುದು ಜನರ ಪ್ರಶ್ನೆಯಾಗುತ್ತಿದೆ. ಮೃತದೇಹದಿಂದ ಮದ್ಯದ ಬಾಟಲಿ ಹಾಗೂ ಬಂದೂಕಿನ ಮದ್ದು ಗುಂಡುಗಳನ್ನೂ ವಶಪಡಿಸಿಕೊಂಡಿದ್ದಾರೆ.

ಹತ್ತಾರು ಮಕ್ಕಳಿರುವ ಅಂಗನವಾಡಿಗೆ ಈತ ಬಂದಾಗ ಮಕ್ಕಳೆಲ್ಲರೂ ಮನೆಗೆ ತೆರಳಿದ್ದರು. ಅಂಗನವಾಡಿ ಸಹಾಯಕಿಯೂ ರಜೆಯಲ್ಲಿದ್ದರು. ಆದ್ದರಿಂದ ಶಿಕ್ಷಕಿ ಹೊನ್ನಮ್ಮ ಮಾತ್ರ ಅಲ್ಲಿದ್ದರು. ಆತ ನೇರವಾಗಿ ಗುಂಡುಹಾರಿಸುವ ಬದಲು ಕತ್ತಿಯಿಂದ ಹಲ್ಲೆ ಮಾಡಿರುವುದರಿಂದ ಆಕೆ ಬದುಕಿ ಉಳಿಯಲು ಸಾಧ್ಯವಾಗಿದೆ.

ಘಟನಾಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕ ಬಿ.ಆರ್. ಲಿಂಗಪ್ಪ, ಎಸ್ಸೆ ಸಂದೇಶ್ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment