ಕನ್ನಡ ವಾರ್ತೆಗಳು

ಶ್ರೀ ಮಹಾಬಲ ಶೆಟ್ಟಿ (ದೇವಕೀತನಯ) ಅವರಿಗೆ ಸಾಮಗ ಪ್ರಶಸ್ತಿ

Pinterest LinkedIn Tumblr

Samaga_awrd_mahabal_sheety

ಮಂಗಳೂರು,ಡಿ.03 : ಹಿರಿಯ ವಕೀಲ, ಹರಿದಾಸ, ಹಾಗೂ ಹರಿಕಥಾ ಪರಿಷತ್ತಿನ‌ ಅಧ್ಯಕ್ಷ ಶ್ರೀ ಮಹಾಬಲ ಶೆಟ್ಟಿ (ದೇವಕೀತನಯ) ‘ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ ಈ ಪುರಸ್ಕಾರ ಸಮಾರಂಭವು ಡಿ.14 ರಂದು ಸೋಮವಾರ ಸಂಜೆ ೪ಕ್ಕೆ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಜರಗಲಿರುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರಗಲಿರುವ ಈ ಕಾರ್ಯಕ್ರಮವನ್ನು‌ ಅರಣ್ಯ ಪರಿಸರ ಖಾತೆ ಮತ್ತು ಜಿಲ್ಲಾ‌ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಲಿರುವರು.

ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆವಹಿಸುವರು. ಡಾ. ಎಂ. ಪ್ರಭಾಕರ ಜೋಶಿ ಅಭಿನಂದನೆ ಸಲ್ಲಿಸುವರು. ಅಭ್ಯಾಗತರಾಗಿ ಪಿಲಿಕುಳ ನಿಸರ್ಗಧಾಮದ ನಿರ್ದೇಶಕರಾದ ಪ್ರಭಾಕರ ಶರ್ಮ ಹಿರಿಯ ವಿದ್ವಾಂಸ ಪ್ರೊ| ಎಂ.ಎಲ್. ಸಾಮಗ ಹಾಗೂ ಹಿರಿಯ‌ ಆರ್ಥಿಕ ತಜ್ಞ ಪಿ. ಜಯರಾಮ ಹಂದೆ ಪಾಲ್ಗೊಳ್ಳಲಿದ್ದು ಬಳಿಕ, ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣ (ಬಡಗು) ಯಕ್ಷಗಾನ ಬಯಲಾಟ ಪ್ರದರ್ಶನವಿರುವುದೆಂದು ತಿಳಿಸಿದ್ದಾರೆ.

ಶ್ರೀ ಕೂಡ್ಲು ಮಹಾಬಲ ಶೆಟ್ಟಿ:
ಶ್ರೀ ಕೂಡ್ಲು ಮಹಾಬಲ ಶೆಟ್ಟಿಯವರು ದೇವಕಿತನಯ ಎಂಬ ಹೆಸರಿನ ಹಿರಿಯ ಹರಿದಾಸ. ಹರಿಕಥಾ ಪರಿಷತ್ತಿನ ಸ್ಥಾಪಕರಾಗಿ ಅಳಿಯುತ್ತಿರುವ ಹರಿಕಥಾ ಕಲೆಯ ಉಳಿವಿಗಾಗಿ ಅವಿರತ ಶ್ರಮಿಸಿದ ಹರಿದಾಸ. ಹರಿಕಥಾ ಸಪ್ತಾಹವನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನೆರವೇರಿಸಿ ಹರಿಕಥೆಯನ್ನು ಜನಪ್ರಿಯಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಯಶಸ್ವಿಯಾದ ಸಂಘಟಕ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಅರ್ಥಧಾರಿಯಾಗಿ ಸದ್ದು ಗದ್ದಲ ವಿಲ್ಲದೆ ಕಲಾ ಸೇವೆಗೈದ ನಿಷ್ಣಾತ ಕಲಾವಿದ.

ಶೇಣಿ ಸಂಸ್ಮರಣಾ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೆರವೇರಿಸಿ ಉದಾತ್ತ ಮನೋಭಾವವನ್ನು ಪ್ರಚುರ ಪಡಿಸಿದ ಕಲಾರಾಧಕ. ಹಲವಾರುಯುವಕ, ಯುವತಿಯರನ್ನು, ಬಾಲಕರನ್ನು ಹರಿಕಥಾ ಕಲೆಯತ್ತ ಆಕರ್ಷಿಸಿ ಈ ಕಲೆಯನ್ನು ಬೆಳೆಸಿ ಪೋಷಿಸುವಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಸಮರ್ಥ. ಎಲೆಮರೆಯಲ್ಲಿದ್ದ ಹಲವಾರು ಹರಿಕಥಾ ಕಲಾವಿದರನ್ನು ಬೆಳಿಕಿಗೆ ತರುವಲ್ಲಿ ‌ಇವರ ಶ್ರಮ‌ ಅಪಾರ. ನ್ಯಾಯವಾದಿಯಾಗಿಯೂ ‌ಇವರು ಪ್ರಸಿದ್ಧರು. ಪ್ರತಿಭಾನ್ವಿತರಾದ‌ ಇವರಿಗೆ ಕಲ್ಕೂರ ಪ್ರತಿಷ್ಠಾನವು 2015 ರ ಸಾಲಿನ ಸಾಮಗ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

Write A Comment