ಕನ್ನಡ ವಾರ್ತೆಗಳು

ಜ.10:ಆನೆಗುಡ್ಡೆಯಲ್ಲಿ ಪೇಜಾವರ ಶ್ರೀಗಳಿಗೆ ಸಾರ್ವಜನಿಕ ಸನ್ಮಾನಕ್ಕೆ ನಿರ್ಧಾರ

Pinterest LinkedIn Tumblr

ಉಡುಪಿ: ಜನವರಿಯಲ್ಲಿ 5  ನೇ ಬಾರಿ ಉಡುಪಿ ಶ್ರೀ ಕೃಷ್ಣಮಠದ ಪರ್ಯಾಯಪೀಠ ಅಲಂಕರಿಸಲಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಕುಂದಾಪುರ ತಾಲ್ಲೂಕು ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಗಿದೆ.

pejavara

ಜನವರಿ 10ರಂದು ಸ್ವಾಮೀಜಿಯವರು ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಲಿದ್ದು ಅದೇ ದಿನ ಬೆಳಿಗ್ಗೆ 10 ಘಂಟೆಗೆ ಸಾರ್ವಜನಿಕ ಸನ್ಮಾನ ಏರ್ಪಡಿಸಲು ನಿರ್ಧರಿಸಲಾಗಿದೆ.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಆನೆಗುಡ್ಡೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.

ಶೃಂಗೇರಿ ಕ್ಷೇತ್ರದ ಪ್ರಾಂತೀಯ ಧರ್ಮದರ್ಶಿ ಎಚ್.ವಿ.ನರಸಿಂಹಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದುಗ್ಗೆಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಪ್ರಾಸ್ತಾವಿಕವಾಗಿ ಮಾತನಾಡಿ ಪೇಜಾವರ ಮಠಾಧೀಶರು ದೇಶದ ಸರ್ವಮಾನ್ಯ ಯತಿಗಳಾಗಿದ್ದು ಅವರು ಈ ಪರ್ಯಾಯ ಪೂಜೆ ಸ್ವೀಕರಿಸುವ ಮುನ್ನ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.

ಎಚ್.ವಿ.ನರಸಿಂಹಮೂರ್ತಿಯವರು ಪೇಜಾವರ ಮಠಾಧೀಶರನ್ನು ಪೂರ್ಣ ಕುಂಭ ಸ್ವಾಗತ ಮಾಡಿ, ಸಾಂಪ್ರದಾಯಿಕವಾಗಿ ಹಾಗೂ ಸಂಭ್ರಮದಿಂದ ಗೌರವಿಸಬೇಕು ಎಂದರು.

ನೇರಂಬಳ್ಳಿ ರಾಘವೇಂದ್ರ ರಾವ್ ಮಾತನಾಡಿ ಪೇಜಾವರ ಶ್ರೀಗಳು ಕೋಟೇಶ್ವರ ಮಾಗಣೆಯ ಜನರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಅವರ ಸಕಲ ಸಾಮಾಜಿಕ, ಧಾರ್ಮಿಕ ಯೋಜನೆ ಗಳಿಗೆ ನಾವು ಕೈ ಜೋಡಿಸಿದ್ದೇವೆ. ಇಲ್ಲಿ ನಡೆಯುವ ಸಾರ್ವಜನಿಕ ಸನ್ಮಾನ, ಗೌರವ, ಸಮಾರಂಭದ ಯಶಸ್ಸಿನಲ್ಲೂ ಪಾಲ್ಗೊಳ್ಳುತ್ತೇವೆ ಎಂದರು.
ದುಗ್ಗೆಗೌಡರು ಮಾತನಾಡಿ ಪೇಜಾವರ ಶ್ರೀಗಳ ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸುವ ಬಗ್ಗೆ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಪ್ರತಿ ಗ್ರಾಮದಲ್ಲೂ ಸಿದ್ಧತೆ ನಡೆಯುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ಇದು ನಡೆಯಲಿದೆ ಎಂದರು.

ಬಿ.ಅಪ್ಪಣ್ಣ ಹೆಗ್ಡೆಯವರು ಮಾತನಾಡಿ ಪೇಜಾವರ ಮಠಾಧೀಶರ ಈ ಹಿಂದಿನ ನಾಲ್ಕು ಪರ್ಯಾಯ ಹೊರೆಕಾಣಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದು ಐದನೇ ಬಾರಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಿದೆ. ಆನೆಗುಡ್ಡೆಯಲ್ಲಿ ಅವರಿಗೆ ಸಾರ್ವಜನಿಕ ಸನ್ಮಾನ ಹಾಗೂ ಹೊರೆಕಾಣಿಕೆ ಸಲ್ಲಿಕೆ ಎರಡೂ ಕಾರ್ಯದಲ್ಲಿ ತಾಲ್ಲೂಕಿನ ಎಲ್ಲರೂ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ದುರ್ಗಾಂಬಾ ಮೋಟಾರ್‍ಸ್‌ನ ಕೃಷ್ಣಾನಂದ ಛಾತ್ರ, ಶ್ರೀ ಬೊಬ್ಬರ್ಯ ದೇವಸ್ಥಾನ ಕುಂದಾಪುರದ ರಮೇಶ ಹೊಳ್ಳ, ದೇವಾಡಿಗರ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಜೀವ ಕೋಟ್ಯಾನ್, ಕೋಟೇಶ್ವರ ಲಯನ್ಸ್‌ನ ಕ್ಲಬ್‌ನ ಅಧ್ಯಕ್ಷ ದಿನಕರ ಶೆಟ್ಟಿ, ಸೋಮಕ್ಷತ್ರಿಯ ಸಂಘದ ರಮೇಶ ಗಾಣಿಗ, ಕುಂಭಾಶಿಯ ಜಿ.ಎಸ್.ಬಿ. ಸಂಘದ ಅಧ್ಯಕ್ಷ ಸುರೇಶ ಪೈ, ಪ್ರಸಾದ ಕಾಮತ್, ಹಿರಿಯ ನಾಗರಿಕ ವೇದಿಕೆಯ ರವಿರಾಜ್ ಶೆಟ್ಟಿ, ಎಚ್.ಸೋಮಶೇಖರ ಶೆಟ್ಟಿ, ಟಿ.ಆರ್. ಹತ್ವಾರ್ ತೆಕ್ಕಟ್ಟೆ, ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ, ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರ ಪ್ರಸಾದ್ ಶೆಟ್ಟಿ, ರಾಮಚಂದ್ರ ವರ್ಣ, ಗಣೇಶ್ ಭಟ್ ಮಾತನಾಡಿದರು.

ಯು.ಎಸ್.ಶೆಣೈ ಸ್ವಾಗತಿಸಿದರು. ಬಿ.ಜಿ.ಸೀತಾರಾಮ ಧನ್ಯ ಕಾರ್ಯಕ್ರಮ ನಿರೂಪಿಸಿದರು.

Write A Comment