ಕನ್ನಡ ವಾರ್ತೆಗಳು

ಮಹಿಳೆಗೆ ಚುಡಾವಣೆ – ತಪ್ಪು ಗ್ರಹಿಕೆ : ಮಸೀದಿ ಗುರುಗಳಿಗೆ ಮಾರಣಾಂತಿಕ ಹಲ್ಲೆ

Pinterest LinkedIn Tumblr

Konaje_station_muttige_1

ಉಳ್ಳಾಲ : ಮಹಿಳೆಯೋರ್ವಳನ್ನು ಪದೇ ಪದೇ ಚುಡಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲು ಹೊಂಚು ಹಾಕಿದ್ದ ಯುವಕರ ತಂಡವೊಂದು ತಪ್ಪಾಗಿ ಮಸೀದಿ ಗುರುಗಳಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಡಿಪು ಬಾಳೆಪುಣಿ ಗ್ರಾಮದ ಮುದುಂಗರ ಕಟ್ಟೆಯಲ್ಲಿ ನಡೆದಿದೆ.ಮುನೀರ್ ಅಹಮದ್ ಸಖಾಫಿ ಎಂಬವರೇ ಯುವಕರಿಂದ ಮಾರಣಾಂತಿಕ ಹಲ್ಲೆಗೊಳಗಾದವರು.

ಮುದುಂಗರ ಕಟ್ಟೆಯ ಉಸ್ತಾದನೊಬ್ಬ ಸ್ಥಳೀಯ ಮಹಿಳಾ ಜನಪ್ರತಿನಿಧಿ ಎದುರು ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಮನೆಯವರಿಗೆ ತಿಳಿಸಿದ್ದರು. ಮುನೀರ್ ಅವರೇ ಆ ಉಸ್ತಾದ್ ಎಂದು ತಪ್ಪಾಗಿ ಗ್ರಹಿಸಿದ ಯುವಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುನೀರ್ ಅವರು ಕೆ.ಸಿ ರೋಡ್ ಮಸೀದಿಯಲ್ಲಿ ಕಳೆದ ಒಂದೂವರೆ ವರುಷದಿಂದ ಮೊಹಿಲಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು , ಸೋಮವಾರ ಮುಂಜಾನೆ ವೇಳೆ ಸಾಲೆತ್ತೂರು ಕೊಲ್ನಾಡು ಗ್ರಾಮದ , ಅಗರಿ ಹೌಸ್ ನಲ್ಲಿರುವ ತನ್ನ ಮನೆಗೆ ಬೈಕ್‍ ನಲ್ಲಿ ತೆರಳುತ್ತಿದ್ದ ವೇಳೆ ಮುಡಿಪು , ಮುದುಂಗರ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎರಡು ಬೈಕುಗಳಲ್ಲಿ ಬಂದ ಐದು ಯುವಕರು ಮುನೀರ್ ಅವರ ಬೈಕಿಗೆ ಅಡ್ಡಗಟ್ಟಿ ರಾಡು ಮತ್ತು ಸೋಂಟೆಗಳಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಹಲ್ಲೆ ನಡೆಸಿದವರನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದಾಗ ಹಲ್ಲೆ ನಡೆಸಿದ ಆರೋಪಿಗಳು ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು. ಅವರನ್ನ ಬಂಧಿಸುವಂತೆ ಹೇಳಿದಾಗ ಠಾಣಾಧಿಕಾರಿ ಸುಧಾಕರ್ ಅವರು ಬೇಕಂತಲೇ ಅವರನ್ನು ರಕ್ಷಿಸಿದ್ದಾರೆಂದು ಹಲ್ಲೆಗೊಳಗಾದ ಮುನೀರ್ ಕಡೆಯವರು ಆರೋಪಿಸಿದ್ದಾರೆ.

ಪೊಲೀಸ್ ಠಾಣೆಯೆದುರು ಆರೋಪಿಗಳನ್ನು ಬಂಧಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆಗೊಂಡು ಉದ್ವಿಘ್ನ ವಾತಾವರಣ ಉಂಟಾದಾಗ ಠಾಣಾಧಿಕಾರಿ ಸುಧಾಕರ್ ಅವರು ಓರ್ವ ಆರೋಪಿ ಎನ್ನಲಾದ ಪ್ರಶಾಂತ್ ಎಂಬವನನ್ನು ಬಂಧಿಸಿದ್ದಾರೆ.

Konaje_station_muttige_2

ರಾಜಿಯಲ್ಲಿ ಇತ್ಯರ್ಥ..

ಹಲ್ಲೆಗೊಳಗಾದ ಮುನೀರ್ ಅವರು ಆರು ಜನರ ವಿರುದ್ಧ ದೂರು ನೀಡಿದ್ದರೆ, ಇತ್ತ ಮುದುಂಗರಕಟ್ಟೆಯ ಮಹಿಳಾ ಜನಪ್ರತಿನಿಧಿಯೂ ಮುನೀರ್ ಸಖಾಫಿಯೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದಾರೆ. ಎರಡೂ ಕಡೆಗಳಿಂದ ದೂರು ಪ್ರತಿದೂರು ಸ್ವೀಕರಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಸಂಜೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮತ್ತು ಮುಡಿಪುವಿನ ಸಮಾಜ ಸೇವಕ ಎಸ್. ಕೆ ಹಾಝರ್ ಅವರ ಮುಂದಾಳುತ್ವದಲ್ಲಿ ಕೋಣಾಜೆ ಠಾಣೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ರಾಜಿ ಸಂಧಾನ ಸಭೆ ನಡೆದು ಪ್ರಕರಣ ಸುಖಾಂತ್ಯಗೊಳಿಸಲಾಗಿದೆ. ಪ್ರಕರಣದ ಕುರಿತು ದೂರು ಪ್ರತಿದೂರು ದಾಖಲಾಗಿದ್ದು ನ್ಯಾಯಾಲಯದಲ್ಲಿ ಪ್ರಕರಣ ರಾಜಿಗೊಳಿಸುವ ನಿರ್ಣಯ ತೆಗೆಯಲಾಯಿತೆನ್ನಲಾಗಿದೆ.

ಮುಡಿಪು ಪರಿಸರ ಎರಡೂ ಕೋಮುಗಳ ಸಾಮರಸ್ಯದ ಪ್ರದೇಶವಾಗಿದ್ದು ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಅಹಿತಕರ ಘಟನೆ ನಡೆಯುತ್ತಿದ್ದು, ಇಂತಹ ಘಟನೆ ಮತ್ತೆ ಮರುಕಳಿಸಲು ಬಿಡುವುದಿಲ್ಲ ಎಂದು ಎಸ್. ಕೆ. ಹಾಝರ್ ಮತ್ತು ಸಂತೋಷ್ ಬೋಳಿಯಾರ್ ಹೇಳಿದ್ದಾರೆ.

Write A Comment