ಕನ್ನಡ ವಾರ್ತೆಗಳು

ಸುರತ್ಕಲ್ : ವಿಲೇವಾರಿ ಮಾಡದೆ ಮನೆಯಲ್ಲಿ ರಾಶಿ ಅಂಚೆ ಪತ್ರ : ಅಂಚೆ ಪೇದೆಯ ಅಮಾನತು.

Pinterest LinkedIn Tumblr

post_letter_photo

ಮಂಗಳೂರು, ನ.28 ಸುರತ್ಕಲ್ ಸಮೀಪದ ಅಂಚೆ ಕಚೇರಿಯ ಪೇದೆಯೋರ್ವ ಕಳೆದ ಐದು ವರ್ಷಗಳಿಂದ ಅಂಚೆ ಪತ್ರಗಳನ್ನು ವಿತರಣೆ ಮಾಡದೆ ಮನೆಯಲ್ಲಿ ರಾಶಿ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ 3 ವರ್ಷಗಳಿಂದ ಅಂಚೆ ಪತ್ರಗಳನ್ನು ವಿತರಿಸದೇ ಮನೆಯಲ್ಲಿ ರಾಶಿ ಹಾಕಿದ್ದಾನೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದರಾದರೂ ಮನೆಯಲ್ಲಿ ಲಭ್ಯವಾದ ಹಲವು ಗೋಣಿಯಷ್ಟಿದ್ದ ಪತ್ರಗಳ ರಾಶಿಯಲ್ಲಿ 2010ಕ್ಕೂ ಹಿಂದಿನ ಪತ್ರಗಳು ಲಭ್ಯವಾಗಿವೆ. ಕಳೆದ 5 ವರ್ಷಗಳಿಂದ ವಂಚನೆ ನಡೆಯುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಇಲಾಖಾ ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ಅಲ್ಲಿಯವರೆಗೆ ಕರ್ತವ್ಯ ಲೋಪ ಎಸಗಿದ ಇಲಾಖಾ ಸಿಬ್ಬಂದಿ ಅಶೋಕ್ ಎಂಬಾತನನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರತ್ಕಲ್ ಸಮೀಪದ ಅಂಚೆ ಕಚೇರಿಯಲ್ಲಿ ಅಂಚೆ ಪತ್ರಗಳ ವಿತರಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ್ ಎಂಬಾತ ತನ್ನ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಪತ್ರಗಳನ್ನು ವಿಲೇವಾರಿ ಮಾಡದೆ, ತನ್ನ ಬಾಡಿಗೆ ಮನೆಯಲ್ಲಿ ರಾಶಿ ಹಾಕುತ್ತಿದ್ದ. ರಿಜಿಸ್ಟರ್ಡ್‌ ಪತ್ರ, ಮನಿ ಆರ್ಡರ್, ಮುಂತಾದವುಗಳನ್ನು ಮಾತ್ರ ವಿತರಣೆ ಮಾಡುತ್ತಿದ್ದ ಅಶೋಕ್ ಉಳಿದ ಸಾಮಾನ್ಯ ಪತ್ರಗಳನ್ನು ವಿತರಿಸದೆ ಅವುಗಳನ್ನು ತನ್ನ ಮನೆಯಲ್ಲಿ ಗೋಣಿಯಲ್ಲಿ ತುಂಬಿಸಿಡುತ್ತಿದ್ದ ಎಂದು ಹೇಳಲಾಗಿದೆ. ಅಶೋಕ್ ಎಸಗಿದ ಈ ಪ್ರಮಾದದಲ್ಲಿ ಕೆಲವರ ಭವಿಷ್ಯವೇ ಅಡಗಿತ್ತು.

ಕೆಲಸದ ಸಂದರ್ಶನ ಪತ್ರಗಳು, ಕೆಲಸಕ್ಕೆ ನೇಮಕ ಆದ ಪತ್ರಗಳ ಸಹಿತ ಇತರ ಕೆಲವೊಂದು ದಾಖಲೆ ಪತ್ರಗಳೂ ಮನೆಯಲ್ಲಿ ಹಾಕಲಾದ ರಾಶಿಯಲ್ಲಿವೆೆ. ಬೆಳಕಿಗೆ ಬಂದಿದ್ದು ಹೇಗೆ: ಅಶೋಕ್ ಕಳೆದ ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಡಿಗೆ ಪಾವತಿ ಆಗದ ಕಾರಣ ಮನೆಯೊಡತಿ ಬಾಗಿಲು ಒಡೆದ ಸಂದರ್ಭದಲ್ಲಿ ‘ಅಂಚೆಯಣ್ಣ’ನ ಮೋಸ ಬೆಳಕಿಗೆ ಬಂದಿದೆ. ಇದೀಗ ಕಳೆದ ಎರಡು ದಿನಗಳಿಂದ ಅಂಚೆ ಕಚೇರಿಗೆ ಬರುತ್ತಿರುವ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Write A Comment