ಕನ್ನಡ ವಾರ್ತೆಗಳು

ಪಿಲಿಕುಳ ನಿಸರ್ಗದಾಮದಲ್ಲಿ ಮಕ್ಕಳ ಹಬ್ಬಕ್ಕೆ ಅದ್ದೂರಿ ಚಾಲನೆ

Pinterest LinkedIn Tumblr

makkala_habba_photo_1

ಮಂಗಳೂರು, ನ.22: ದ.ಕ. ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಎಂಬಂತೆ, ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಹಬ್ಬ’ಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿ ಪ್ರವಾಹದಂತೆ ಹರಿದು ಬಂದ ಶಾಲಾ ಮಕ್ಕಳು ಸಾಕ್ಷಿಯಾದರು.

ಪಂಡಿತ್ ಜವಾಹರಲಾಲ್ ನೆಹರೂ ಅವರ 125ನೆ ಜನ್ಮ ದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ 2 ದಿನಗಳ ಮಕ್ಕಳ ಹಬ್ಬದ ಪ್ರಥಮ ದಿನವಾದ ಶನಿವಾರ ವಿಭಿನ್ನ ವೇಷಧಾರಿ ಮಕ್ಕಳ ಮೆರವಣಿಗೆಯ ಬಳಿಕ ವಿವಿಧ ಕಾರ್ಯಕ್ರಮಗಳಿಗೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು

ಗಮನಸೆಳೆದ ಮೆರವಣಿಗೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ಉದ್ಯಾನವನದ ಪ್ರವೇಶ ದ್ವಾರದಿಂದ ಮೃಗಾಲಯದ ತನಕ ಮಕ್ಕಳ ಆಕರ್ಷಕ ಮೆರವಣಿಗೆ ಗಮನಸೆಳೆಯಿತು. ಬಾಲ ಗಾಂಧೀಜಿ ಸೇರಿದಂತೆ ಸ್ವಾತಂತ್ರ ಯೋಧರು, ಪ್ರಮುಖ ನಾಯಕರ ವೇಷಧಾರಿ ಮಕ್ಕಳೊಂದಿಗೆ ಬ್ಯಾಂಡ್‌ಸೆಟ್, ಸ್ಕೌಟ್ಸ್-ಗೈಡ್ಸ್ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದರು.

makkala_habba_photo_2 makkala_habba_photo_3 makkala_habba_photo_4 makkala_habba_photo_5 makkala_habba_photo_6 makkala_habba_photo_7 makkala_habba_photo_8 makkala_habba_photo_9 makkala_habba_photo_10 makkala_habba_photo_11

ಬೊಂಬೆ ಬಳಗದ ಜೊತೆ ಬೃಹದಾಕಾರದ ಕೋಳಿಯ ಪ್ರತಿಕೃತಿ ಮಕ್ಕಳನ್ನು ಮನರಂಜಿಸಿತು. ಮೃಗಾಲಯದ ಎದುರು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾ ಟಿಸಿದ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ವಿಜೇತೆ ಪಂಚಮಿ ಮಾರೂರು ಮಾತನಾಡಿ, ಇಂತಹ ಮಕ್ಕಳ ಹಬ್ಬ ವಿವಿಧ ಶಾಲಾ ಮಕ್ಕಳು ಮುಕ್ತವಾಗಿ ಮನೋರಂಜನೆ ಪಡೆಯಲು ಸಹ ಕಾರಿಯಾಗಿದೆ ಎಂದರು. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಶಾಲೆಯಿಂದ ಹೊರಗಿನ ಪ್ರಪಂಚಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದಿಲ್ಲ. ಇಂತಹ ಕಾರ್ಯಕ್ರಮ ಮಕ್ಕಳ ಸಂಕುಚಿತ ಮನಸ್ಸನ್ನು ಅರಳಿಸಿ ಮುದ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ರೂವಾರಿ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಒತ್ತಡದ ಜೀವನದ ನಡುವೆ ಪೋಷಕರಿಗೆ ಮಕ್ಕಳಿಗೆ ಮುಕ್ತ ವಾತಾವರಣದಲ್ಲಿ ಮನೋರಂಜನೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಮಕ್ಕಳ ಹಬ್ಬದ ಮೂಲಕ ವಿವಿಧ ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ಶಿಕ್ಷಕರ ಜೊತೆ ಮುಕ್ತವಾಗಿ ಮನೋರಂಜನೆ ಪಡೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಸಿಸ್ಟರ್ ಸೋನಲ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ. ಜಿಲ್ಲಾ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ್ ಶರ್ಮಾ, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಕ್ಕಳ ಸಂಭ್ರಮದಲ್ಲಿ ಭಾಗಿಯಾದರು.

makkala_habba_photo_12 makkala_habba_photo_13 makkala_habba_photo_14 makkala_habba_photo_15 makkala_habba_photo_16 makkala_habba_photo_17 makkala_habba_photo_18 makkala_habba_photo_19 makkala_habba_photo_20

ಸೌಹಾರ್ದದ ಸಂದೇಶ ನೀಡಿದ ಮಕ್ಕಳ ಹಬ್ಬ:
ಮಕ್ಕಳ ದಿನಾಚರಣೆಯಂದೇ ಮಕ್ಕಳ ಹಬ್ಬ ನಡೆಸಲು ಸಾಕಷ್ಟು ತಯಾರಿ, ಮಕ್ಕಳಿಂದಲೂ ಆಸಕ್ತಿ ವ್ಯಕ್ತವಾಗಿದ್ದರೂ, ಜಿಲ್ಲೆಯ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ವಾರ ನಡೆಸುವಂತಾಯಿತು. ಇಂದಿನ ಈ ಮಕ್ಕಳ ಹಬ್ಬದಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ. ಹೊರ ಜಿಲ್ಲೆಗಳಿಂದ ಮಕ್ಕಳು, ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇರಲಿಲ್ಲ. ರವಿವಾರವೂ ಭಾರೀ ಸಂಖ್ಯೆಯಲ್ಲಿ ಮಕ್ಕಳು ಸೇರುವ ನಿರೀಕ್ಷೆಯಿದ್ದು, ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ.
-ಎ.ಬಿ.ಇಬ್ರಾಹೀಂ, ಜಿಲ್ಲಾಧಿಕಾರಿ, ದ.ಕ.

ಮಕ್ಕಳ ಹಬ್ಬದಲ್ಲಿ ಶನಿವಾರ ಒಟ್ಟು 43,000 ಮಂದಿ ಭಾಗವಹಿಸಿದ್ದರು. ಇವರಲ್ಲಿ ದ.ಕ. ಜಿಲ್ಲೆಯಿಂದ 22,000 ಮಕ್ಕಳು ಮತ್ತು 7,000 ಶಿಕ್ಷಕರು. ಹೊರಜಿಲ್ಲೆಯ ಮಕ್ಕಳ ಸಂಖ್ಯೆ 9,000 ಹಾಗೂ ಇತರ ಸಾರ್ವಜನಿಕರ ಸಂಖ್ಯೆ 5,000 ಎಂದು ಜಿಲ್ಲಾಡಳಿತ ಪ್ರಕಟನೆ ತಿಳಿಸಿದೆ.

Write A Comment