ಬೆಳ್ತಂಗಡಿ/ಮಂಗಳೂರು,ನ.20: ನಾಲ್ವರು ದುಷ್ಕರ್ಮಿಗಳ ತಂಡವೊಂದು ಬೆಳ್ತಂಗಡಿ ಠಾಣೆಗೆ ನುಗ್ಗಿ ಪೊಲೀಸರಿಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದ ಘಟನೆ ಗುರುವಾರ ನಡೆದಿದೆ.
ಬಂಧಿತರನ್ನು ಹಾಸನ ಕೆಎಂಎಫ್ ಬಳಿಯ ಬಟ್ಟೆ ವ್ಯಾಪಾರಿ ದಯಾನಂದ್ ಬಿ. (37), ವೈದ್ಯಕೀಯ ವೃತ್ತಿಯ ಹಾಸನದ ರಾಜಪುರ ರಸ್ತೆಯ ರವಿ (40), ಹಾಸನ ಬಿ. ಎಂ. ರೋಡ್‌ನ ಹೋಟೆಲ್ ಶ್ರೀಕೃಷ್ಣದ ರಂಗನಾಥ ಭಟ್ (46), ಬೆಳಗಾವಿಯ ಸದಾಶಿವ ನಗರದ ಬಸವರಾಜ ಕೊಡಚಿ (27) ಎಂದು ಗುರುತಿಸಲಾಗಿದೆ.
ಒಳನುಗ್ಗಿ ಪ್ರಭಾರ ಠಾಣಾಧಿಕಾರಿ ಹೆಡ್ ಕಾನ್‌ಸ್ಟೆಬಲ್ ಲೋಕನಾಥ ಅವರ ಬಳಿಯೂ ದರ್ಪದಿಂದ ಮಾತನಾಡಿದ. ಎಲ್ಲಿ ನಿಮ್ಮ ಎಸ್‌ಐ, ಎಲ್ಲಿ ನಿಮ್ಮ ಇನ್‌ಸ್ಪೆಕ್ಟರ್ ಎಂದಾಗ ಪೊಲೀಸರು ಸಹಜವಾಗಿ ತಾವು ಯಾರು ಎಂದು ಕೇಳಿದ್ದಾರೆ. ಅದಕ್ಕೆ ಆತ ನಾನು ಯಾರೆಂದು ಆಮೇಲೆ ಹೇಳುತ್ತೇನೆ ಎನ್ನುತ್ತಾ ಮೊಬೈಲ್‌ನಲ್ಲಿ ಅವರ ಫೋಟೋ ತೆಗೆದ.
ಯಾವುದೋ ಕೆಲಸದ ನೆಪವೊಡ್ಡಿ ಠಾಣೆಗೆ ಮಧ್ಯಾಹ್ನದ ವೇಳೆ ಬಂದ ದಯಾನಂದ ಏಕಾಏಕಿ ಬಾಯಿಗೆ ಬಂದಂತೆ ದಬಾಯಿಸಿ, ನಾನು ಹಿರಿಯ ಪೊಲೀಸ್ ಅಧಿಕಾರಿಗಳ ಅತ್ಮೀಯ, ನನಗೆ ಗೌರವ ಕೊಡಬೇಕೆಂದು ತಿಳಿಯುವುದಿಲ್ವಾ ಎಂದು ಪ್ರಶ್ನಿಸಿ,ಲೋಕನಾಥ ಅವರನ್ನು ದೂಡಿದ. ತಡೆಯಲು ಬಂದ ಹರೀಶ್ ಅವರನ್ನು ತತ್‌ಕ್ಷಣ ದಯಾನಂದ್ ಜತೆಗಿದ್ದ ವ್ಯಕ್ತಿ ದೂಡಿದ. ನಿಮ್ಮನ್ನು ಏನು ಮಾಡಬೇಕೆಂದು ತಿಳಿದಿದೆ, ನಾನು ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಂದು ದಯಾನಂದ್ ಹೇಳಿದ. ಜತೆಗೆ ಸೊಂಟದಿಂದ ರಿವಾಲ್ವರ್ ತೆಗೆದು ಒಬ್ಬೊಬ್ಬರನ್ನೂ ಶೂಟ್ ಮಾಡಿ ಮುಗಿಸುತ್ತೇನೆ ಎಂದು ಗುರಿ ಇಟ್ಟ.
ಇದು ಯಾವುದೇ ಅಧಿಕೃತ ಮಾನವ ಹಕ್ಕುಗಳ ಸಂಘಟನೆಯಾಗಿರುವ ಬಗ್ಗೆ ಮಾಹಿತಿಯಿಲ್ಲವಾಗಿದ್ದು ಇವರು ಯಾವುದೇ ಸಂಚಿನಿಂದ ಬೆಳ್ತಂಗಡಿಗೆ ಬಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಠಾಣೆಗೆ ನುಗ್ಗಿ ರಿವಾಲ್ವರ್ ತೆಗೆದು ರಾದ್ದಾಂತ ಮಾಡಿದ ದಯಾನಂದ ಮಧ್ಯ ಸೇವಿಸಿದ್ದರು ಎನ್ನಲಾಗಿದೆ,ಇವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಯಲ್ಲಿ ದಾಖಲಿಸಲಾಗಿದೆ.
