ಕನ್ನಡ ವಾರ್ತೆಗಳು

ಪ್ರತಿಯೊಬ್ಬ ನಾಗರೀಕರು ಕನ್ನಡ ಕಟ್ಟುವ ಕೆಲಸದಲ್ಲಿ ಕೈಜೋಡಿಸ ಬೇಕು : ಡಾ. ಮೋಹನ್ ಆಳ್ವ

Pinterest LinkedIn Tumblr

mohan-alva

ಶ್ರೀಗೌರಿ ಎಸ್.ಜೋಶಿ – ಮಂಗಳೂರು,ನ.20:  `ಕನ್ನಡಭಾಷೆಯನ್ನು ಬೆಳೆಸುವ, ಕನ್ನಡ ಕಟ್ಟುವ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳೇ ಏಕೆ ಮಾಡಬೇಕು?ಕನ್ನಡ ಮನಸ್ಸುಗಳನ್ನು ಕಟ್ಟುವ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?’ ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ `ಆಳ್ವಾಸ್ ನುಡಿಸಿರಿ’. ಈ ಕನ್ನಡ ಉತ್ಸವದ ರೂವಾರಿ `ಸಂಸ್ಕೃತಿಯ ಹರಿಕಾರ’ ಎಂದೇ ಖ್ಯಾತರಾದ ಡಾ.ಎಂ. ಮೋಹನ್ ಆಳ್ವರು. ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಹೊಸತನಗಳಿಗೆ ಸ್ಪಂದಿಸುವುದು ಅಗತ್ಯವೆಂದು ಹೇಳುವ ಡಾ.ಆಳ್ವರು `ಕರ್ನಾಟಕ:ಹೊಸತನದ ಹುಡುಕಾಟ’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಈ ಸಲದ ನುಡಿಸಿರಿಯನ್ನು ಆಯೋಜಿಸಿದ್ದಾರೆ. ಹೊಸತನ ಎಂದರೇನು, ಹೊಸತನದಡಿಯಲ್ಲಿ ನುಡಿಸಿರಿಯ ಆಯಾಮಗಳೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದು ಹೀಗೆ…..

1. `ಆಳ್ವಾಸ್ ನುಡಿಸಿರಿ’ ಪ್ರತಿಸಲವೂ `ಕನ್ನಡ ಮನಸ್ಸು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿತ್ತು.ಆದರೆ ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೀರಿ. ಈ ಬದಲಾವಣೆಯ ಹಿನ್ನೆಲೆಯೇನು?
12  ವರ್ಷಗಳಿಂದ ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಬೇರೆ ಬೇರೆ ಪರಿಕಲ್ಪನೆ ಕೊಟ್ಟಿದ್ದೇವೆ. ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ಸಂದರ್ಭದಲ್ಲಿ ಮುಖ್ಯ ವಿಷಯ `ಕನ್ನಡ ಮನಸ್ಸು: ಅಂದು, ಇಂದು, ಮುಂದು’ ಎಂದಿತ್ತು.ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಲಾಗಿದೆ. ಏಕೆಂದರೆ ನಮ್ಮ ಬದುಕು, ಸಂಸ್ಕೃತಿ ನಿಂತ ನೀರಾಗಬಾರದು. ನಾವು ಯಾವತ್ತೂ ಹೊಸತನದ ಹುಡುಕಾಟದಲ್ಲಿರಬೇಕು. ಇಲ್ಲದಿದ್ದರೆ ನಾವು ಸವಕಲು ನಾಣ್ಯಗಳಾಗುತ್ತೇವೆ. ಹೊಸತನದೊಟ್ಟಿಗೆ ಹೋದಾಗ ಮಾತ್ರ ನಾವು ಚಲಾವಣೆಯಲ್ಲಿರುವ ನಾಣ್ಯಗಳಾಗುತ್ತೇವೆ. ಹೊಸತನದ ಹುಡುಕಾಟ ಇಂದಿನ ಅಗತ್ಯತೆ. ಕಾಲಕ್ಕೆ ಸರಿಯಾಗಿ ನಾವು ಸ್ಪಂದಿಸಬೇಕು ಹಾಗೂ ಅತ್ಯಂತ ಅವಶ್ಯಕವೂ ಹೌದು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯ ಕೇಂದ್ರ ವಿಷಯವನ್ನು `ಕರ್ನಾಟಕ:ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೇವೆ.

2.ಕನ್ನಡ ಎಂದರೆ ಅದು ಕೇವಲ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ. ಒಟ್ಟಾರೆಯಾಗಿ ಕನ್ನಡ ಭಾಷೆ,ಕಲೆ,ಜಾನಪದಕ್ಕೆ ಸಂಬಂಧಿಸಿದ್ದು ಎಂಬುದು ನಿಮ್ಮ ಅಭಿಪ್ರಾಯ. ಇದರ ಬಗ್ಗೆ….
ಭಾಷೆ, ಅದನ್ನು ನಂಬಿರುವ ಸಾಹಿತ್ಯ, ಸಂಸ್ಕೃತಿಗಳು ಬಹು ಮುಖ್ಯವಾದವು. ಒಂದು ಭಾಷೆ ಬರೀ ಸಾಹಿತ್ಯ ಅಥವಾ ಸಂಸ್ಕೃತಿಯೊಂದಿಗೆ ಮಾತ್ರ ಬೆಸೆದುಕೊಳ್ಳಬಾರದು. ಒಂದು ಭಾಷೆ ಯಾವಾಗಲೂ ಜನಾನುರಾಗಿಯಾಗಿರಬೇಕು. ಸಾಮಾನ್ಯವಾಗಿ ಆಗುವುದೇನೆಂದರೆ ಸಾಹಿತ್ಯ ಯಾವಾಗಲೂ ಸಾಹಿತಿಗಳ ಕೈಯಲ್ಲಿರುತ್ತದೆ, ಸಂಸ್ಕೃತಿ ಯಾವಾಗಲೂ ಕಲಾವಿದರ ಕೈಯಲ್ಲಿರುತ್ತದೆ. ಆದರೆ ಇದು ಒಳ್ಳೆಯದಲ್ಲ. ಒಂದು ಭಾಷೆ ಯಾವಾಗಲೂ ಸಾಹಿತ್ಯ, ಸಂಸ್ಕೃತಿಯನ್ನು ಒಟ್ಟುಗೂಡಿಸಿಕೊಂಡು ಶ್ರೀಸಾಮಾನ್ಯನನ್ನು ತಲುಪಬೇಕು. ಹಾಗೆ ಅದು ಆಡುಭಾಷೆಯಾಗಿ ಬೆಳೆಯಬೇಕು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯಲ್ಲಿ ನಾವು ಶ್ರೀಸಾಮಾನ್ಯನನ್ನು ತಲುಪುವ ಉದ್ದೇಶದಿಂದ ಬೇರೆ ಬೇರೆ ಮಗ್ಗುಲುಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಹೋಗಿದ್ದೇವೆ. ಆಬಾಲವದ್ಧರಾದಿಯಾಗಿ, ಎಲ್ಲಾ ವರ್ಗಗಳಿಗೂ, ವೃತ್ತಿಗಳಿಗೂ ಸೇರಿದ ಜನರನ್ನು ಒಟ್ಟುಗೂಡಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ನುಡಿಸಿರಿ, ವಿರಾಸತ್ ಹೀಗೆಯೇ ನಡೆಯಬೇಕೆಂದು ನಮ್ಮ ಆಸೆ.

3.ನುಡಿಸಿರಿಯ ಭಾಗವಾಗಿ ತುಳುಸಿರಿ, ಕೊಂಕಣಿಸಿರಿ, ಬ್ಯಾರಿಸಿರಿಯನ್ನೂ ಕೂಡ ಆಯೋಜಿಸಿದ್ದೀರಿ. ಇದರಿಂದ ಒಟ್ಟಂದದಲ್ಲಿ ಒಂದು ಸಂಸ್ಕೃತಿ ಹೇಗೆ ಬೆಳೆಯಬಹುದೆಂದು ನಿಮಗನ್ನಿಸುತ್ತದೆ?
ನಮ್ಮ ದೇಶದಲ್ಲಿ 3000ಕ್ಕೂ ಮಿಕ್ಕಿದ ಭಾಷೆಗಳಿವೆ, ಜಾತಿಗಳಿವೆ. ಅದರಲ್ಲಿ 14 ಭಾಷೆಗಳನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಎಲ್ಲ ಭಾಷೆ-ಸಂಸ್ಕೃತಿಗಳು ಉಳಿಯಬೇಕು, ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಕರಾವಳಿಯಿಂದ ಒಂದು ಅಳಿಲು ಸೇವೆ ಸಲ್ಲಬೇಕೆಂಬುದು ನಮ್ಮ ಆಶಯ. ಎಲ್ಲಾ ಭಾಷೆಗಳನ್ನು ಮುಖ್ಯವಾಗಿಟ್ಟುಕೊಂಡು ಉತ್ಸವ ಮಾಡದೇ ಹೋದರೂ ಕೊನೆಯ ಪಕ್ಷ ನಮ್ಮ ಭಾಷೆಗಳನ್ನು ಪ್ರಮುಖವೆಂದು ಪರಿಗಣಿಸಿ ನಮ್ಮ ಸೇವೆಯನ್ನು ನೀಡಬಹುದು. ಇದೇ ಕಾರಣಕ್ಕೆ ನಾವು ತುಳು, ಬ್ಯಾರಿ, ಕೊಂಕಣಿ, ಕೊಡವ ಭಾಷೆಗಳನ್ನು ಪ್ರಮುಖವಾಗಿರಿಸಿಕೊಂಡು ನುಡಿಸಿರಿಯ ಒಂದು ಭಾಗವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಅವರವರ ಭಾಷಾ ಕಾರ್ಯಕ್ರಮವಾದಾಗ ಜನ ಖಂಡಿತ ಕಾರ್ಯಕ್ರಮಕ್ಕೆ ಬರುತ್ತಾರೆ, ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಹೀಗೆ ಒಂದು ಸಂಸ್ಕೃತಿ ಬೆಳೆಯುತ್ತದೆ. ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನ ಬಂದು ನಮ್ಮ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು ಆ ಮೂಲಕ ಸ್ವಾಭಿಮಾನ ಅವರಲ್ಲಿ ಹುಟ್ಟಬೇಕು ಎಂಬುದಾಗಿದೆ. ಇದೇ ತುಳುಸಿರಿ, ಕೊಂಕಣಿಸಿರಿ, ಬ್ಯಾರಿಸಿರಿ ಆಯೋಜನೆಯ ಮುಖ್ಯ ಆಶಯ.

4.ನುಡಿಸಿರಿಯಲ್ಲಿ ಜನರನ್ನು ಹೆಚ್ಚು ಆಕರ್ಷಿಸಿದ್ದು, ಆಶ್ಚರ್ಯಪಡಿಸಿದ್ದು ಇಲ್ಲಿರುವ ವೇದಿಕೆಗಳು. ಪ್ರತಿಸಲವೂ ವಿಭಿನ್ನ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಗಳು ನಿರ್ಮಾಣವಾಗುತ್ತವೆ. ಇದರ ಬಗ್ಗೆ ಏನು ಹೇಳುತ್ತೀರಿ?
ವಜ್ರ, ಬಂಗಾರ ಮುಂತಾದ ಅಮೂಲ್ಯ ವಸ್ತುಗಳನ್ನು ನಾವು ಹೇಗೆ ಪ್ರದರ್ಶಿಸುತ್ತೇವೆ? ಬಂಗಾರಕ್ಕೆ ಸುಂದರ ಆಭರಣದ ರೂಪ ನೀಡಿ ಅದನ್ನು ಧರಿಸುತ್ತೇವೆ. ಇದರಿಂದ ಬಂಗಾರಕ್ಕೂ ಅದನ್ನು ಧರಿಸಿದವರಿಗೂ ಒಂದು ಶೋಭೆ ಬರುತ್ತದೆ. ಹಾಗೆಯೇ ನಮ್ಮ ಕನ್ನಡ ಭಾಷೆ ಕೂಡ. ನಮ್ಮ ಭಾಷೆ ಅನರ್ಘ್ಯವಾದ ರತ್ನವಿದ್ದಂತೆ. ಅದನ್ನು ಪ್ರಸ್ತುತ ಪಡಿಸುವಾಗ ವೈಭವೀಕರಣವೆಂಬುದು ಬೇಕೇ ಬೇಕು. ನುಡಿಸಿರಿಯ ವೇದಿಕೆ, ಚಪ್ಪರ, ಅದಕ್ಕಾಗಿ ನಿರ್ಮಾಣಗೊಂಡ ದಾರಿಗಳು, ಇಡೀ ನೂರು ಎಕರೆಯ ಆವರಣ ಹಾಗೂ ಇಲ್ಲಿ ಪ್ರದರ್ಶನಗೊಳ್ಳುವ ಕಾರ್ಯಕ್ರಮಗಳು ಪ್ರತಿಯೊಂದೂ ಮುಖ್ಯವಾದುದು. ಸುಮಾರು ೪೦-೫೦ ಸಾವಿರ ಜನರೆದುರಿಗೆ ಇವೆಲ್ಲವೂ ತೆರೆದುಕೊಳ್ಳುವಾಗ ಅಲ್ಲಿ ವೈಭವೀಕರಣ ಅಗತ್ಯವೂ ಹೌದು. ಈ ವಿಧದಲ್ಲಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ರೀತಿಯಲ್ಲಿ ಕನ್ನಡ ಭಾಷೆಯನ್ನು ಪ್ರಸ್ತುತ ಪಡಿಸಲು ಯತ್ನಿಸುತ್ತೇವೆ.

ಇಲ್ಲಿ ನಾವು ಕೇಂದ್ರೀಕರಿಸುವುದು ಚಿಕ್ಕ ಮಕ್ಕಳನ್ನು. ಆಗ ತಾನೇ ಬುದ್ಧಿ ಮನಸ್ಸು ಹುಟ್ಟಿದ ಚಿಕ್ಕ ಮಕ್ಕಳಲ್ಲಿ ಇನ್ನೂ ಭಾಷೆ-ಸಂಸ್ಕೃತಿಯ ಗಂಭೀರತೆಯ ಅರಿವಿರುವುದಿಲ್ಲ. ಅವರಿಗೆ ಇಷ್ಟವಾಗುವ ಕಾರ್ಯಕ್ರಮಗಳನ್ನಿಟ್ಟು ಅವರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಹಾಗಾದಾಗ ಮಕ್ಕಳು ನುಡಿಸಿರಿ ಬಗ್ಗೆ ಆಕರ್ಷಿತರಾಗಿ ತಂದೆ-ತಾಯಿಗಳ ಮನವೊಲಿಸಿ ಅವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತಾರೆ. ಇನ್ನು 16 ದಾಟಿದ ಯುವವರ್ಗ ಫ್ಯಾಶನ್ ಕೇಂದ್ರಿತವಾದುದು. ಅವರು ಈ ಫ್ಯಾಶನ್‌ಗಾಗಿಯೇ ಕಾರ್ಯಕ್ರಮಕ್ಕೆ ಬರುತ್ತಾರೆ. ಹಾಗೆ ಬಂದವರು ಕನ್ನಡ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಯುವಜನತೆಗೆ, ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವುದರ ಮೂಲಕ ಅವರನ್ನು ನಾವು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ. ಇನ್ನು ೪೦ ವರ್ಷ ದಾಟಿದ ಪ್ರಬುದ್ಧರು, ೬೦ ವರ್ಷ ದಾಟಿದ ಹಿರಿಯರು ನಮ್ಮ ಕಾರ್ಯಕ್ರಮಕ್ಕೆ ಬರುತ್ತಾರೆ. ಹೀಗೆ ಆಬಾಲವೃದ್ಧರಾದಿಯಾಗಿ ನಾನಾ ರೀತಿಯ ಕಲಾವಿದರು, ಕಲಾಸಕ್ತರು, ಸೌಂದರ್ಯಪ್ರಜ್ಞೆಯಿರುವವರನ್ನು ಒಟ್ಟುಗೂಡಿಸಿಕೊಂಡು ನಾವು ಕಾರ್ಯಕ್ರಮ ಮಾಡುವಾಗ ಎಲ್ಲರನ್ನೂ ತಲುಪಬೇಕಾದುದು ಅತೀ ಅವಶ್ಯ. ಹೀಗಾಗಿ ನಮ್ಮ ಕಾರ್ಯಕ್ರಮಗಳ ವೇದಿಕೆಗಳಿಗೆ, ಅವುಗಳ ವೈಭವೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ.

5. ಡಾ.ಆಳ್ವರನ್ನು ಜನ ತುಂಬಾ ವಿಶಿಷ್ಟವಾಗಿ ಹಾಗೂ ಅಷ್ಟೇ ಗೌರವದಿಂದ ನೋಡುತ್ತಾರೆ. ಇದಕ್ಕೆ ಮುಖ್ಯ ಕಾರಣ ನೀವು ಕಾರ್ಯರೂಪಕ್ಕೆ ತರುವ ನಿಮ್ಮ ಸೃಜನಶೀಲತೆ ಹಾಗೂ ಹೊಸತನಗಳು. ಈ ಸಲದ ನುಡಿಸಿರಿಗೆ ಯಾವ ಬಗೆಯ ಹೊಸ ಸ್ಪರ್ಶ ನೀಡುತ್ತಿದ್ದೀರಿ?
ಪ್ರತಿವರ್ಷವೂ ನುಡಿಸಿರಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ನುಡಿಸಿರಿಗೆ ೧೨ ವರ್ಷದಿಂದ ಹಾಗೂ ವಿರಾಸತ್ ನೋಡಲು ೨೨ ವರ್ಷದಿಂದ ಬಂದ ಜನರಿದ್ದಾರೆ. ವಿನೂತನ ಕಾರ್ಯಕ್ರಮಗಳನ್ನು ಹುಡುಕಿಕೊಂಡು ದೇಶ-ವಿದೇಶಗಳಿಂದ ಈ ಕಾರ್ಯಕ್ರಮಗಳಿಗಾಗಿ ಬರುತ್ತಾರೆ. ಹೀಗಿದ್ದಾಗ ಅವರ ನೀರಿಕ್ಷೆಗಳಿಗೆ ತಕ್ಕಂತೆ ನಾವು ಕೆಲಸ ಮಾಡಬೇಕಾಗುತ್ತದೆ.

ಈ ಸಲ ನುಡಿಸಿರಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಸುಮಾರು 30ಸಾವಿರ ಜನ ಕುಳಿತುಕೊಳ್ಳಬಹುದಾದ ದೊಡ್ಡ ಬಯಲು ರಂಗಮಂದಿರ ನಿರ್ಮಾಣವಾಗಿದೆ. 26ರಂದು ಸಂಜೆ ನಡೆಯುವ ಉದ್ಘಾಟನ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ವಿಶೇಷ ಆಹ್ವಾನಿತರು, ಎಲ್ಲಾ ಘಟಕಗಳ ಮಖ್ಯಸ್ಥರು, ಗಣ್ಯರು ಹೀಗೆ 500 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾಗಿರಿಯ ಆವರಣದಲ್ಲಿರುವ ಐದು ವೇದಿಕೆಗಳಲ್ಲಿ ಏಕಕಾಲದಲ್ಲಿ ಸಂಜೆ 5  ರಿಂದ 11  ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಇದರೊಡನೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ ಗೋಷ್ಠಿಗಳು ಬೆಳಗ್ಗೆ ನಡೆಯಲಿವೆ. `ವಿದ್ಯಾರ್ಥಿಸಿರಿ’ಯು 26 ರಂದು ಬೆಳಗ್ಗೆಯಿಂದ ಆರಂಭವಾಗಲಿದೆ. ನಮ್ಮ ಮುಖ್ಯ ಪರಿಕಲ್ಪನೆಯಾದ `ಕರ್ನಾಟಕ:ಹೊಸತನದ ಹುಡುಕಾಟ’ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಹೊಸತನವಿರುವಂತೆ ನೋಡಿಕೊಳ್ಳಲಾಗಿದೆ. ಹೀಗೆ ಈ ಬಾರಿಯ ನುಡಿಸಿರಿಯನ್ನು ಆಯೋಜಿಸಲಾಗಿದೆ.

6.ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕೆಂಬುದು ನಿಮ್ಮ ಆಸೆ. ಅದಕ್ಕಾಗಿಯೇ ನಿಮ್ಮ ಸಂಸ್ಥೆಯಲ್ಲಿ ಮಾದರಿ ಕನ್ನಡ ಶಾಲೆಯನ್ನು ನಿರ್ಮಾಣ ಮಾಡಿದ್ದೀರಿ ಕೂಡ. ಈ ಶಾಲೆ ನಿಮಗೆ ತೃಪ್ತಿ ನೀಡಿದೆಯೇ? ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಿದೆಯೇ?
ನಮ್ಮ ಕನ್ನಡ ಶಾಲೆಯ ಬಗ್ಗೆ ನನಗೆ ಬಹು ದೊಡ್ಡ ಗುರಿಯಿದೆ. ಈ ಶಾಲೆಯು ಕನ್ನಡ ಶಾಲೆಗಳನ್ನು ನಡೆಸುವ ಆಡಳಿತ ಮಂಡಳಿ, ಇತರೆ ಕನ್ನಡ ಶಾಲೆಗಳು, ಪಾಲಕರ ಕಣ್ಣನ್ನು ತೆರೆಸಬೇಕಿದೆ. ಇಂದಿನ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಗಮನಿಸಿದರೆ ಅವು ಇಂಗ್ಲೀಷ್ ಮಾಧ್ಯಮ, ಸಿಬಿ‌ಎಸ್‌ಸಿ, ಐಸಿ‌ಎಸ್‌ಸಿ ಹಾಗೂ ಎನ್‌ಸಿ‌ಇ‌ಆರ್‌ಟಿ ಪಠ್ಯಕ್ರಮದ ಹಾವಳಿಗೆ ಒಳಪಟ್ಟಿವೆ. ಎಲ್ಲಾ ಕನ್ನಡ ಶಾಲೆಗಳ ಶಿಕ್ಷಕರು ಇಂದು ಹೊಸತನದ ಹುಡುಕಾಟದಲ್ಲಿ ತೊಡಗಿಕೊಳ್ಳಬೇಕಿದೆ. ಒಂದು ಸಾಮಾನ್ಯ ಕನ್ನಡಶಾಲೆಯನ್ನು ಹೇಗೆ ಗಟ್ಟಿಗೊಳಿಸಬೆಕೆಂಬುದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ನಮ್ಮ ಇಲಾಖೆಗಳು, ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರಾದರೂ ಇಂದಿನ ಪ್ರಸ್ತುತತೆಗೆ ತಕ್ಕಂತೆ ಕನ್ನಡ ಶಾಲೆ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಶಾಲೆಯು ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.

6 ವರ್ಷಗಳ ಹಿಂದೆ ನಮ್ಮ ಕನ್ನಡ ಶಾಲೆ ಆರಂಭವಾಯಿತು. ಈಗ 650 ಮಕ್ಕಳು ನಮ್ಮ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಶಾಲೆಯನ್ನು ನಮ್ಮ ರಾಜ್ಯದ ಜನತೆ ಒಪ್ಪಿದ್ದಾರೆ. ಬೌದ್ಧಿಕವಾಗಿ, ಸಾಂಸ್ಕೃತಿವಾಗಿ ಹಾಗೂ ಕ್ರೀಡೆಯಲ್ಲಿ ನಮ್ಮ ಮಕ್ಕಳೇ ಮುಂದಿದ್ದಾರೆ. ನಮ್ಮ ಶಿಕ್ಷಕರು ಜಡ್ಡು ಹಿಡಿದ ವಾತಾವರಣದಿಂದ ಹೊರಬಂದು ಉತ್ಸಾಹಿತರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸ್‌ಗಳನ್ನು ತೆಗೆದುಕೊಳ್ಳುವಷ್ಟು, ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಸಿದ್ಧ ಪಡಿಸುವಷ್ಟು ಆಸಕ್ತರಾಗಿದ್ದಾರೆ. ನಮ್ಮ ಶಾಲೆಗೆ 6 ಮತ್ತು 8ನೇ ತರಗತಿಗೆ ಸೇರಲು ಬಂದ ಅರ್ಜಿಗಳ ಸಂಖ್ಯೆ 6000. ಇದು ಸಾಮಾನ್ಯವಾದುದಲ್ಲ.ಇಂಗ್ಲೀಷ್ ಮಾಧ್ಯಮ ಬಿಟ್ಟು ಕನ್ನಡ ಮಾಧ್ಯಮ ಸೇರಲು ಬಯಸುತ್ತಿದ್ದಾರೆ. ಇದು ನನಗೆ ಸಂತೋಷ, ತೃಪ್ತಿ ನೀಡಿದೆ. ಇಂದು ಯಾವ ದೃಷ್ಟಿಯಿಂದ ನೋಡಿದರೂ ಕೂಡ ನಮ್ಮ ಕನ್ನಡ ಮಾಧ್ಯಮ ಶಾಲೆ ರಾಜ್ಯದಲ್ಲಿಯೇ ನಂಬರ್ ವನ್ ಎನಿಸಿದೆ.

7.ಘಟಕಗಳ ಯಶಸ್ಸಿನ ಬಗ್ಗೆ….
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ಹೊರ ರಾಜ್ಯಗಳಲ್ಲಿ ಹಾಗೂ ವಿದೇಶೀ ವೇದಿಕೆಗಳಲ್ಲಿ ಘಟಕಗಳನ್ನು ನಡೆಸಲಾಗಿದೆ. ಇಲ್ಲಿಯವರೆಗೂ 85 ಘಟಕಗಳನ್ನು ಮಾಡಲಾಗಿದೆ. ಇಂದು ಜನ ನಮ್ಮ ಘಟಕಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಿದ್ದಾರೆ, ತಮ್ಮಲ್ಲಿಯೇ ಬಂದು ಕಾರ್ಯಕ್ರಮ ನಡೆಸಿಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಅಥಣಿಯಂತಹ ಊರಿನಲ್ಲಿ ನಮ್ಮ ಕಾರ್ಯಕ್ರಮಕ್ಕೆ60-70 ಸಾವಿರ ಜನ ಸೇರಿದ್ದಾರೆ. ಇದರ ಸಂಘಟನೆ ಆಗಿದ್ದೇ ಅತ್ಯಂತ ಮಹತ್ವಪೂರ್ಣವಾದುದು. ನಮ್ಮದು ಬೀದಿಗಿಳಿದು ಹೋರಾಟ ಮಾಡುವ ಸಂಘಟನೆ ಅಲ್ಲ, ಬದಲಾಗಿ ಕನ್ನಡ ಮನಸ್ಸುಗಳನ್ನು ಕಟ್ಟುವ ಸಂಘ. ಆಳ್ವಾಸ್ ನುಡಿಸಿರಿ ವಿರಾಸತ್ ಇಡೀ ರಾಜ್ಯದಲ್ಲಿ ಜನಾನುರಾಗಿಯಾಗಲು ಮುಖ್ಯ ಕಾರಣ ಈ ಘಟಕಗಳು.

8. `ಜನ ಮರುಳೋ ಜಾತ್ರೆ ಮರುಳೋ’ ಎಂಬ ಮಾತಿದೆ. ನಿಮ್ಮ ಪ್ರಕಾರ ಯಾರು ಮರುಳರು?
12 ವರ್ಷದ ಹಿಂದೆ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಅವಕಾಶ ಬಂದಿತ್ತು. ಅದನ್ನು ಪೂರೈಸಿ ಒಂದು ಒಳ್ಳೆಯ ಅನುಭವ ಪಡೆದಿದ್ದೇನೆ. ಇಲ್ಲಿಯವರೆಗೂ ಒಂದು ಬದ್ಧತೆಯಿಂದ ಕಾರ್ಯಕ್ರಮವನ್ನು ಮಾಡುವವರನ್ನು ನೋಡಿದ್ದೇನೆ; ಒಂದು ಸಲ ಕಾರ್ಯಕ್ರಮ ಮಾಡಿ ಕೈಚೆಲ್ಲಿ ಕುಳಿತವರನ್ನೂ ನೋಡಿದ್ದೇನೆ. ಇದೆಲ್ಲವನ್ನೂ ನೋಡಿದಾಗ ಅನಿಸಿದ್ದು ನಾವು ಯಾಕೆ ಬದ್ಧತೆಯಿಂದ ಒಂದು ಕಾರ್ಯಕ್ರಮ ಮಾಡಬಾರದು ಎಂದು. ಯಾಕೆ ಸರಕಾರವೇ ಕನ್ನಡ ಕಾರ್ಯಗಳನ್ನು ಮಾಡಬೇಕು?ಪರಿಷತ್ತು, ಅಕಾಡೆಮಿಗಳೇ ಯಾಕೆ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡಬೇಕು? ನಮ್ಮಂತಹ ಶ್ರೀಸಾಮಾನ್ಯರೇಕೆ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಾರದು? ಕೇವಲ ತಪ್ಪುಗಳನ್ನು ಎತ್ತಿ ತೋರಿಸಿ ಸುಮ್ಮನೇ ಕುಳಿತುಕೊಳ್ಳುವುದು ಸರಿಯಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಯೋಚಿಸಿ ನಮ್ಮ ಶಿಕ್ಷಣಸಂಸ್ಥೆಯಲ್ಲಿ `ಆಳ್ವಾಸ್ ನುಡಿಸಿರಿ’ ಹೆಸರಿನಲ್ಲಿ ಈ ಕನ್ನಡ ಕಟ್ಟುವ ಕಾರ್ಯವನ್ನು ಆರಂಭಿಸಿದೆವು.

ದೇವಸ್ಥಾನದಲ್ಲಿ ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ವರ್ಷಕ್ಕೊಮ್ಮೆ ದೊಡ್ಡ ಉತ್ಸವ ನಡೆಯುತ್ತದೆ. ಹತ್ತು ಹನ್ನೆರಡು ವರ್ಷಗಳಿಗೊಮ್ಮೆ ಬ್ರಹ್ಮ ಕಲಶೋತ್ಸವ ನಡೆಯುತ್ತದೆ. ಅಂತೆಯೇ ಆಳ್ವಾಸ್‌ನಲ್ಲಿಯೂ ಕೂಡ ಕನ್ನಡ-ಸಂಸ್ಕೃತಿ ಪರ ಕಾರ್ಯಕ್ರಮಗಳು ವರ್ಷವಿಡೀ ಪೂಜೆಯಂತೆ ನಡೆಯುತ್ತವೆ. ಆಳ್ವಾಸ್ ನುಡಿಸಿರಿ ಒಂದು ದೊಡ್ಡ ಉತ್ಸವದಂತೆ. ಇನ್ನು ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ಬ್ರಹ್ಮ ಕಲಶೋತ್ಸವದಂತೆ. ಈ ಕಾರ್ಯಕ್ರಮಗಳಿಗೆ ಜನರು ಖಂಡಿತ ಸೇರುತ್ತಾರೆ. ಇಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವುದಷ್ಟೇ ನನ್ನ ಕೆಲಸ.

9 .ಆಳ್ವಾಸ್ ನುಡಿಸಿರಿಯ ಮುಖ್ಯ ಉದ್ದೇಶ ಕನ್ನಡ ಮನಸ್ಸುಗಳನ್ನು ಕಟ್ಟುವುದಾಗಿದೆ. ಈ ಕೈಂಕರ್ಯದಲ್ಲಿ ನಿಮ್ಮ ಉದ್ದೇಶ ಸಾಧನೆಯಾಗಿದೆಯೇ?
ನೂರಕ್ಕೆ ನೂರರಷ್ಟು ಈ ಕಾರ್ಯ ಯಶ ಕಂಡಿದೆ. ಪ್ರತಿಸಲವೂ ನುಡಿಸಿರಿ ನೋಡಿದ ಪ್ರೇಕ್ಷಕರು ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆಯೆಂದೇ ಹೇಳಿದ್ದಾರೆ. ಅವರು ಹಾಗೆ ಹೇಳುವಾಗ ನುಡಿಸಿರಿ ಇನ್ನೂ ನೂರು ವರ್ಷ ಮುಂದುವರಿದುಕೊಂಡು ಹೋಗಬಹುದು ಎಂಬ ಭರವಸೆ ಮೂಡುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿ ನಾವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದೇವೆ. ಪ್ರತಿ ಸಲದ ಅಂಕಿ-ಅಂಶಗಳನ್ನು ಗಮನಿಸುವಾಗ ನುಡಿಸಿರಿ-ವಿರಾಸತ್ ಬಗ್ಗೆ ಸಮಾಧಾನ ಇದೆ. ಅದರ ಫಲಿತಾಂಶದ ಬಗ್ಗೆ ಸಂತೃಪ್ತಿಯಿದೆ. ಈ ಕಾರ್ಯಕ್ರಮಗಳನ್ನೇ ಮಾದರಿಯಾಗಿಟ್ಟುಕೊಂಡು ಬೇರೆ ಕಾರ್ಯಕ್ರಮಗಳಾಗುತ್ತಿವೆ ಅದು ನನಗೆ ಸಂತಸ ನೀಡಿದೆ.

10.ನುಡಿಸಿರಿ ಒಂದು ವಿದ್ವತ್ ಪ್ರಪಂಚವನ್ನು ದಾಟಿ ಒಬ್ಬ ಶ್ರೀಸಾಮಾನ್ಯನನ್ನು ತಲುಪಬೇಕೆಂಬುದು ನಿಮ್ಮ ಆಶಯ. ಅದು ಈಡೇರಿದೆಯೇ?
ಖಂಡಿತವಾಗಿಯೂ ಈಡೇರಿದೆ. ನಮ್ಮ ಕಾರ್ಯಕ್ರಮಕ್ಕೆ ವಿದ್ವಜ್ಜನರು, ಶ್ರೀಸಾಮಾನ್ಯರು ಎಲ್ಲರೂ ಬರುತ್ತಾರೆ. ಗಂಭಿರತೆಯಿರದ ಜನರೂ ಸಹ ಬಂದು ಪ್ರೀತಿ, ವಿಶ್ವಾಸದಿಂದ ಕಾರ್ಯಕ್ರಮ ನೋಡುತ್ತಾರೆ. ಇದಕ್ಕೆ ಮತ, ಜಾತಿ, ಭಾಷೆ ಯಾವುದರ ಹಂಗಿಲ್ಲ. ಎಷ್ಟೋ ಸಲ ಕನ್ನಡ ಭಾಷೆ ಬರದವರೂ ಸಹ ಬಂದು ನುಡಿಸಿರಿ ನೋಡಿದ್ದಾರೆ. ಕನ್ನಡ ಭಾಷೆ ನಮ್ಮ ಭಾಷೆ, ನಮ್ಮ ನಾಡಿನ ಭಾಷೆ. ಎಲ್ಲರೂ ಬಂದು ಭಾಗವಹಿಸಿದಾಗ ಮಾತ್ರ ಅದು ಒಂದು ಆಡುಭಾಷೆಯಾಗಲು ಸಾಧ್ಯ.

11.ಈ ಸಲದ ನುಡಿಸಿರಿಯ ಬಗ್ಗೆ ನಿಮ್ಮ ನಿರೀಕ್ಷೆಗಳೇನು?
ಆಬಾಲವೃದ್ಧರಾದಿಯಾಗಿ ಎಲ್ಲರೂ ಆಳ್ವಾಸ್ ನುಡಿಸಿರಿಗೆ ಬರಬೇಕು.5000 ಜನ ಈಗಾಗಲೇ ನೋಂದಾವಣೆ ಮಾಡಿಕೊಂಡಾಗಿದೆ. ನಮಗೆ ನೂರು ರೂಪಾಯಿ ಮುಖ್ಯವಲ್ಲ. ಆದರೆ ಅದನ್ನು ಕಳಿಸುವ ಜನರ ಪ್ರೀತಿ ವಿಶ್ವಾಸ ಮುಖ್ಯವಾದುದು. ಕಾರ್ಯಕ್ರಮಕ್ಕೆ 4500 ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದೆ. ನಿತ್ಯವೂ ಇಪ್ಪತ್ತರಿಂದ ಮೂವತ್ತು ಸಾವಿರ ಜನ ಸೇರಲಿದ್ದಾರೆ.ಪೂರ್ವ ತಯಾರಿಗಳು ಈಗಾಗಲೇ ಮುಗಿದಿವೆ. ಕಾರ್ಯಕ್ರಮ ಚೆನ್ನಾಗಿ ಮೂಡಿಬರಲಿದೆ.

ಇದು `ಮೂಡುಬಿದಿರೆಯ ಕನಸುಗಾರ’ ಡಾ.ಎಂ.ಮೋಹನ್ ಆಳ್ವರ ಮನದಾಳದ ಮಾತುಗಳು. ಕನ್ನಡ ರಕ್ಷಣೆ ಒಬ್ಬ ಶ್ರೀಸಾಮಾನ್ಯನ ಹೊಣೆ ಎಂಬುದು ಅವರ ಖಚಿತ ನುಡಿ. ಒಳ್ಳೆಯ ಆಶಯಗಳನ್ನಿಟ್ಟುಕೊಂಡು ನಡೆಯುತ್ತಿರುವ `ಆಳ್ವಾಸ್ ನುಡಿಸಿರಿ’ ಯಶಸ್ಸು ಕಾಣಲೆಂಬುದು ನಮ್ಮ ಆಶಯ.

Write A Comment