ಕನ್ನಡ ವಾರ್ತೆಗಳು

ಅಹಿತಕರ ಘಟನೆ ಹಿನ್ನೆಲೆ : ಉಳ್ಳಾಲ, ಸುರತ್ಕಲ್‌ನಲ್ಲಿ ನಿಷೇಧಾಜ್ಞೆ ಮುಂದುವರಿಕೆ : ಪೊಲೀಸ್ ಕಮಿಷನರ್

Pinterest LinkedIn Tumblr

Sp_press_meet_1

ಮಂಗಳೂರು, ನ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದ್ದರೂ ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನ.16ರಿಂದ 18ರವರೆಗೆ ಮೂರು ದಿನಗಳವರೆಗೆ ಉಳ್ಳಾಲ ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಸ್.ಮುರುಗನ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯ ಜೊತೆ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‌ಆರ್‌ಪಿ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉಳ್ಳಾಲ ಮತ್ತು ಸುರತ್ಕಲ್ ಹೊರತುಪಡಿಸಿ ಉಳಿದೆಡೆಗಳಲ್ಲಿ ನಿಷೇಧಾಜ್ಞೆಯನ್ನು ಹಿಂಪಡೆಯಲಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಕೆಲವೆಡೆ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಉಳ್ಳಾಲ ಮತ್ತು ಸುರತ್ಕಲ್ ಭಾಗಗಳಲ್ಲಿ ಕೆಲವು ಅಹಿತಕರ ಘಟನೆಗಳನ್ನು ನಡೆಯುತ್ತಿರುವುದರಿಂದ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲ ಮನೆಗಳಿಗೆ, ವ್ಯಕ್ತಿಗಳಿಗೆ ಪೊಲೀಸ್ ನಿಯೋಜನೆ ಸಾಧ್ಯವಿಲ್ಲ. ಪೊಲೀಸ್ ಇಲ್ಲದ ಜಾಗದಲ್ಲಿ, ಜನಸಂಚಾರ ಕಡಿಮೆ ಇರುವೆಡೆಗಳಲ್ಲಿ ಕಿಡಿಗೇಡಿಗಳು ದುಷ್ಕೃತ್ಯವೆಸಗುತ್ತಿದ್ದಾರೆ. ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಡಾ.ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು.

Write A Comment