ಕನ್ನಡ ವಾರ್ತೆಗಳು

ರೈಲ್ವೆ ಪ್ರಯಾಣಿಕರ ಕುಂದು ಕೊರತೆ ಸಭೆ.

Pinterest LinkedIn Tumblr

Zp_railway_meeting_1

ಮಂಗಳೂರು, ನ.07:  ರೈಲ್ವೆ ಪ್ರಯಾಣಿಕರ ಕುಂದುಕೊರತೆ, ರೈಲ್ವೆ ಅಭಿವೃದ್ಧಿ ಮುಂತಾದ ವಿಷಯಗಳ ಕುರಿತು ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗಿನ ಚರ್ಚೆ ಸಂಸದ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಂಭಾಗಣದಲ್ಲಿ ಶನಿವಾರ ನಡೆದಿದ್ದು, ಈ ಸಂದರ್ಭ ಬೈಕಂಪಾಡಿ ಬಳಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆಯಲ್ಲಿ ನ. 21ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಂಸದರು ಸೂಚಿಸಿದ್ದಾರೆ.

Zp_railway_meeting_2 Zp_railway_meeting_3 Zp_railway_meeting_4 Zp_railway_meeting_5

ಈ ರಸ್ತೆಯು ಪಣಂಬೂರು, ಸುರತ್ಕಲ್ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸೇತುವೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಇದೇ ಸಂದರ್ಭ ಸಂಸದರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ನ. 20ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ನ. 21 ರಿಂದ ಇಲ್ಲಿ ವಾಹನ ಸಂಚಾರ ಆರಂಭ ವಾಗಬೇಕು, ಕಾಮಗಾರಿ ಸಂಪೂರ್ಣವಾಗದಿದ್ದರೆ ಸಾರ್ವಜನಿಕರೇ ಅಧಿಕಾರಿಗಳನ್ನು ವಿಚಾರಿಸುವ ಸನ್ನಿವೇಶ ನಿರ್ಮಾಣವಾಗಬಹುದು ಎಂದು ಅವರು ಎಚ್ಚರಿಸಿದರು.

ಪಾಂಡೇಶ್ವರದಲ್ಲಿ ಕಿರಿಕ್: ಗೂಡ್ಸ್ ರೈಲುಗಳಿಂದಾಗಿ ಪಾಂಡೇಶ್ವರ ರೈಲ್ವೆ ಗೇಟ್‍ನಲ್ಲಿ ಪ್ರತಿನಿತ್ಯ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿವೆ. ಪಾಂಡೇಶ್ವರ ಹಾಗೂ ಹೊಯ್ಗೆಬಝಾರ್ ರಸ್ತೆಗಳಲ್ಲಿ ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, ಇಲ್ಲಿನ ರೈಲ್ವೆ ಗೇಟ್ ಸ್ಥಳಾಂತರಿಸುವ ಪ್ರಕ್ರಿಯೆ ಸದ್ಯ ಸ್ಥಗಿತಗೊಂಡಿದೆ. ಹಾಗಾಗಿ ಆ ಎರಡೂ ಗೇಟ್‍ಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಪ್ಪು ಕುಡ್ಪಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ, ಪಡೀಲ್-ಬಜಾಲ್ ಮೇಲ್ಸೇತುವೆ ಉದ್ಘಾಟನೆ ಮೊದಲಾದ ಕಾರ್ಯಕ್ರಮಗಳಿಗೆ ಕೇಂದ್ರ ರೈಲ್ವೆ ಸಚಿವರು ಆಗಮಿಸಲಿದ್ದು, ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಕಂಕನಾಡಿ ರೈಲ್ವೆ ಸ್ಟೇಷನ್‍ನಲ್ಲಿ ಪ್ರೀಪೆಯ್ಡ್ ರಿಕ್ಷಾ ಕೌಂಟರ್, ಕಂಕನಾಡಿ ರೈಲ್ವೆ ಜಂಕ್ಷನ್‍ನಲ್ಲಿ ಕೆಲಸ ಮಾಡದ ಮೆಟಲ್ ಡಿಟೆಕ್ಟರ್, ಸಿಸಿಟಿವಿ ಕ್ಯಾಮರಾ ಅಳವಡಿಸದೆ ಸುರಕ್ಷತೆಗಾಗುತ್ತಿರು ಅಡಚಣೆ, ಅಂಗರಗುಂಡಿ ಬೈಕಂಪಾಡಿ ರೈಲ್ವೆ ಸೇತುವೆಯ ಸುರಕ್ಷತೆ ಮೊದಲಾದವುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಯಾಮ್‍ಸನ್, ರೈಲ್ವೆ ಪಾಲಕ್ಕಾಡ್ ವಿಭಾಗದ ವಿಭಾಗೀಯ ಪ್ರಬಂಧಕ ಆನಂದ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಕುಮಾರ್, ರೈಲ್ವೇ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Write A Comment