ಕನ್ನಡ ವಾರ್ತೆಗಳು

ಜೈಲಿನಲ್ಲಿ ಡಬ್ಬಲ್ ಮರ್ಡರ್ ಹಿನ್ನೆಲೆ : ಕರ್ತವ್ಯ ಲೋಪವೆಸಗಿದ ಜೈಲ್ ಅಧೀಕ್ಷಕರು ಸೇರಿ ಐವರು ಸಸ್ಪೆಂಡ್

Pinterest LinkedIn Tumblr

Subjail_adgp_vist_2

ಮಂಗಳೂರು : ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಇಬ್ಬರು ಕೈದಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲ್‌ ಸುಪರಿಂಟೆಂಡೆಂಟ್‌ ಓಬಳೇಶಪ್ಪ ಮತ್ತು ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಬಂದೀಖಾನೆ ಎಡಿಜಿಪಿ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

ನವೆಂಬರ್‌ 2 ರಂದು ವಿಚಾರಣಾಧೀನ ಕೈದಿಗಳ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಕುಖ್ಯಾತ ಪಾತಕಿ ಛೋಟಾ ಶಕೀಲ್‌ ಸಹಚರ ಮಾಡೂರು ಯೂಸುಫ್‌ ಮತ್ತು ಇನ್ನೋರ್ವ ಕೈದಿ ಗಣೇಶ್‌ ಶೆಟ್ಟಿ ಎಂಬವರು ಕೊಲೆಯಾಗಿದ್ದರು. ಈ ವೇಳೆ 7 ಮಂದಿ ಕೈದಿಗಳು ಮತ್ತು ಜೈಲ್ ಸುಪರಿಂಟೆಂಡೆಂಟ್ ಓಬಳೇಶಪ್ಪ, ಸಿಬಂದಿ ಜವರಾಯ ಗಾಯಗೊಂಡಿದ್ದರು. ಜೈಲಿನಲ್ಲಿ ಕೈದಿಗಳಾಗಿರುವ ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರ ಕುಖ್ಯಾತ ರೌಡಿ ಆಕಾಶ್ ಭವನ ಶರಣ್ ತಂಡ ಈ ಕೃತ್ಯ ಎಸಗಿತ್ತು ಎಂದು ದೂರು ದಾಖಲಾಗಿದೆ.

ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದು, ಘಟನೆಯನ್ನು ತಡೆಯಲು ವಿಫಲವಾದ ಮತ್ತು ಕರ್ತವ್ಯ ಲೋಪವಾದ ಹಿನ್ನಲೆಯಲ್ಲಿ ಜೈಲ್‌ ಸುಪರಿಂಟೆಂಡೆಂಟ್‌ ಓಬಳೇಶಪ್ಪ ಮತ್ತು ನಾಲ್ವರು ಸಿಬ್ಬಂದಿಗಳನ್ನು ಮಂಗಳೂರು ಪೊಲೀಸ್‌ ಆಯುಕ್ತ ಎಸ್‌.ಮುರುಗನ್‌ ಅವರ ಶಿಫಾರಸ್ಸಿನ ಮೇಲೆ ಅಮಾನತು ಮಾಡಿ ಬಂದೀಖಾನೆ ಇಲಾಖೆ ಎಡಿಜಿಪಿ ಕಮಲ್‌ ಪಂತ್‌ ಆದೇಶ ಹೊರಡಿಸಿದ್ದಾರೆ.

ಕೈದಿಗಳ ಹತ್ಯೆ ಯಾದ ಎರಡು ದಿನಗಳ ಬಳಿಕ ಕಾರಾಗೃಹದಲ್ಲಿ ಪೊಲೀಸರ ಸಹಕಾರ ದೊಂದಿಗೆ ತಪಾಸಣೆ ನಡೆಸಿದ ವೇಳೆ 16 ಮೊಬೈಲ್‌ ಫೋನ್‌ ,7ಸಿಮ್‌ ಕಾರ್ಡ್‌,7 ಮೆಮೊರಿ ಕಾರ್ಡ್‌ ,10 ಮೊಬೈಲ್‌ ಚಾರ್ಜರ್‌, ಸಣ್ಣ 6 ಚಾಕು/ ಚೂರಿ, ಎಲೆಕ್ಟ್ರಿಕಲ್‌ ವಯರ್‌,„ ಕಟ್ಟಿಂಗ್‌ ಪ್ಲೆಯರ್‌, „ ಲೈಟರ್‌, ಎಲೆಕ್ಟ್ರಿಕಲ್‌ ಟೆಸ್ಟರ್‌, „ ಎಲೆಕ್ಟ್ರಿಕಲ್‌ ಹೀಟರ್‌, „ ಇಸ್ತ್ರೀ ಪೆಟ್ಟಿಗೆ, ವಯರ್‌,„ ಮೆಣಸಿನ ಹುಡಿ ಪತ್ತೆಯಾಗಿತ್ತು.

ಘಟನೆ ನಡೆದ ದಿನ ತಡರಾತ್ರಿ ಮಂಗಳೂರಿಗೆ ಆಗಮಿಸಿದ್ದ ಬಂದೀಖಾನೆ ಎಡಿಜಿಪಿ ಕಮಲ್ ಪಂಥ್, ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದರು. ಸಂಪೂರ್ಣ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಈ ಅಮಾನತು ಪ್ರಕ್ರಿಯೆ ನಡೆದಿದೆ.

ನೂತನ ಜೈಲ್ ಅಧೀಕ್ಷಕರ ನೇಮಕ :

ಇದೇ ಸಂದರ್ಭದಲ್ಲಿ ತೆರವಾದ ಸುಪರಿಂಟೆಂಡೆಂಟ್‌ ಸ್ಥಾನಕ್ಕೆ ಹಾಸನದಿಂದ ಕೃಷ್ಣಮಾರ್ತಿ ಎಂಬವರನ್ನು ನೂತನ ಅಧೀಕ್ಷಕರಾಗಿ ಮಂಗಳೂರಿನ ಸಬ್ ಜೈಲ್ ಗೆ ನೇಮಕಗೊಳಿಸಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

Write A Comment