ಕನ್ನಡ ವಾರ್ತೆಗಳು

ಡಬ್ಬಲ್ ಮರ್ಡರ್ ಹಿನ್ನೆಲೆ : ಅಧಿಕಾರಿಗಳಿಂದ ಜೈಲಿನೊಳಗೆ ತಪಾಸಣೆ :16 ಮೊಬೈಲ್‌ಗಳು, 6 ಚೂರಿ ಸಹಿತಾ ಹಲವು ಸೊತ್ತು ವಶ

Pinterest LinkedIn Tumblr

Subjail_adgp_vist_6

ಮಂಗಳೂರು, ನ.5: ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ನಡೆದ ಮಾಡೂರು ಯೂಸುಫ್ ಮತ್ತು ಗಣೇಶ್ ಶೆಟ್ಟಿ ಹತ್ಯೆಯ ಬಳಿಕ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು, ಕಾರಾಗೃಹಕ್ಕೆ ನಗರ ಪೊಲೀಸ್ ಅಧಿಕಾರಿಗಳ ಹಾಗೂ ಕಾರಾಗೃಹ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಸೆಲ್‌ಗಳ ತಪಾಸಣೆ ನಡೆಸಿದೆ. ಈ ಸಂದರ್ಭ ಜೈಲಿನೊಳಗೆ 6 ಚೂರಿಗಳ ಸಹಿತ ಕೆಲವು ವಸ್ತುಗಳು ಪತ್ತೆಯಾಗಿವೆ.

ಜೈಲಿನ ರೂಮ್ ಹಾಗೂ ಸೆಲ್‌ಗಳಲ್ಲಿ ತಪಾಸಣೆ ನಡೆಸಿದಾಗ 16 ಮೊಬೈಲ್‌ಗಳು, 6 ಚೂರಿ, 7 ಸಿಮ್ ಕಾರ್ಡ್‌ಗಳು, 7 ಮೆಮೋರಿ ಕಾರ್ಡ್‌ಗಳು, ಮೊಬೈಲ್ ಬ್ಯಾಟರಿಗಳು,ಚಾರ್ಜರ್‌ಗಳು, ಎಲೆಕ್ಟ್ರಿಕ್ ವಯರ್, ಕಟ್ಟಿಂಗ್ ಪ್ಲೆಯರ್, ಲೈಟರ್, ಎಲೆಕ್ಟ್ರಿಟ್ ಟೆಸ್ಟರ್, ಎಲೆಕ್ಟ್ರಿಕ್ ಹೀಟರ್, ಮೆಣಸಿನ ಹುಡಿ, ಇಸ್ತ್ರಿ ಪೆಟ್ಟಿಗೆಯ ವಯರ್‌ಗಳು ದೊರೆತಿದ್ದು, ಇವುಗಳನ್ನು ವಶಪಡಿಸಿಕೊಂಡು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದಲ್ಲಿರುವ ಸಬ್ ಜೈಲು ಕೈದಿಗಳಿಗೆ ಭೂಲೋಕದ ಸ್ವರ್ಗದಂತಾಗಿದೆ. ಕೈದಿಗಳಿಗೆ ಬೇಕಾದ ಎಲ್ಲಾ ವಸ್ತುಗಳೂ ಜೈಲಿನೊಳಗೆ ಸಿಗುತ್ತಿರುತ್ತದೆ. ಈ ಜೈಲಿನೊಳಗೆ ಎಲ್ಲವೂ ಯಾವ ಸಮಯದಲ್ಲಾದರೂ ಹೋಗುತ್ತದೆ ಅನ್ನೋದು ಇದೀಗ ಜಗಜ್ಜಾಹಿರವಾಗಿದೆ.

ರಾಜ್ಯದ ಎಲ್ಲಾ ಜೈಲಿಗಿಂತಲೂ ಮಂಗಳೂರು ಜೈಲಿನ ಸ್ಥಿತಿ ವಿಭಿನ್ನವಾಗಿದೆ.ಸಾಮಾರ್ಥ್ಯಕ್ಕಿಂತ ಹೆಚ್ಚಿರುವ ಖೈದಿಗಳು, ಭೂಗತಪಾತಕಿಗಳಿಂದ ಹಿಡಿದು ಪಿಕ್‍ಪಾಕೇಟ್ ನಡೆಸುವ ಕಳ್ಳರವರೆಗಿನ ಕೈದಿಗಳು, ಕೋಮು ಸಂಘರ್ಷದಲ್ಲಿ ಭಾಗಿಯಾದ ಕೈದಿಗಳು ಸೇರಿದಂತೆ ವಿಭಿನ್ನವಾಗಿರುವ ಕೈದಿಗಳೇ ಇರೋದು. ಈ ಜೈಲಿನಲ್ಲಿಸಾಕಷ್ಟು ಬಾರಿ ಗಾಂಜಾ, ಮದ್ಯದ ಬಾಟಲಿ, ಬೀಡಿ, ಸಿಗರೇಟು, ಗುಟ್ಕಾ, ಮೊಬೈಲ್ ಸೇರಿದಂತೆ ಹೊರಗಿನ ಜಗತ್ತಿನಲ್ಲಿ ಸಿಗುವ ಎಲ್ಲಾ ವಸ್ತುಗಳು ಪತ್ತೆಯಾಗುತ್ತಿದ್ದವು. ಹೀಗಾಗಿಯೇ ಕೈದಿಗಳಿಗೆ ಹೊರಗಿನ ಸಮಾಜಕ್ಕಿಂತ ಇದೇ ಜಾಗ ಲೇಸು ಎನ್ನುವಂತಾಗಿದೆ. ಮಾತ್ರವಲ್ಲದೆ ಹೊರಗಡೆ ನಡೆಯಬೇಕಾದ ಕೃತ್ಯದ ಸ್ಕೆಚ್ಚೂ ಇಲ್ಲೇ ನಡೆಯುತ್ತಿರುತ್ತದೆ ಎನ್ನುವುದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿ. ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಇದೀಗ ಜೈಲಿನೊಳಗೆ ಮಾರಕಾಸ್ತ್ರಗಳು ಬಂದು ಹತ್ಯೆ ನಡೆಯುವ ಹಂತಕ್ಕೂ ಬಂದಿದೆ. ಇದಕ್ಕೆಲ್ಲ ಜೈಲಿನ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರೇ ಕಾರಣ ಅನ್ನುವ ಆರೋಪವು ಈಗ ಕೇಳಿ ಬರುತ್ತಿದೆ.

ಜೈಲಿನೊಳಗೆ ಸೋಮವಾರ ಬೆಳ್ಳಂಬೆಳಗೆ ಪಾತಕಿಗಳಾದ ಮಾಡೂರು ಯೂಸೂಫ್ ಹಾಗೂ ಗಣೇಶ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಜೈಲಿನೊಳಗಿದ್ದ ಕೈದಿಗಳೇ ಹತ್ಯೆ ನಡೆಸಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಮಾರಕಾಸ್ತ್ರದವರೆಗಿನ ವಸ್ತುಗಳೂ ಈ ಜೈಲಿನೊಳಗೆ ಹೋಗುತ್ತದೆ ಅನ್ನೋದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಜೈಲಿನೊಳಗೆ ಹೇಗೆ ಎಲ್ಲಾ ವಸ್ತುಗಳು ಸೇರುತ್ತದೆ ಅನ್ನುವುದನ್ನು ಪೊಲೀಸ್ ಅಧಿಕಾರಿಗಳೇ ಸ್ಪಷ್ಟವಾಗಿ ಹೇಳುತ್ತಾರೆ.

ಜೈಲಿನ ಸುತ್ತಮುತ್ತ ಸುರಕ್ಷಿತವಾದ ತಡೆಗೋಡೆಗಳಿಲ್ಲದ ಕಾರಣ ತಡೆಗೋಡೆಯ ಮೂಲಕ ಎಲ್ಲವೂ ಜೈಲಿನೊಳಗೆ ಸೇರುತ್ತದೆ. ತಡೆಗೋಡೆಯ ಸುತ್ತ ಇರುವ ಮರಗಳನ್ನೇರಿ ವಸ್ತುಗಳನ್ನು ಜೈಲಿನೊಳಗೆ ಎಸೆಯಲಾಗುತ್ತದೆ. ಜೈಲಿನೊಳಗೆ ಕೈದಿಗಳಿಗೆಂದು ತರುವ ಆಹಾರ ಪದಾರ್ಥಗಳೊಟ್ಟಿಗೆ ವಸ್ತುಗಳು ಬರುತ್ತದೆ. ಸಿಸಿಕ್ಯಾಮರಾ ಇಲ್ಲದಿರೋದರಿಂದ ಎಲ್ಲವೂ ಸುಗಮವಾಗುತ್ತದೆ.

ಇದೆಲ್ಲವೂ ಸಿಬ್ಬಂದಿಗಳಿಗೂ ಗೊತ್ತಿದೆ. ಆದರೆ ಏನು ಮಾಡುವಂತಿಲ್ಲ. ಇವರ ಪರಿಸ್ತಿತಿ ಇನ್ನಷ್ಟು ಯಾತನಮಯವಾಗಿದೆ. ಇಲ್ಲಿ ಕೈದಿಗಳೇ ಸಿಬ್ಬಂದಿಗಳನ್ನು ನಿಯತ್ರಿಸುತ್ತಿದ್ದಾರೆ, ಕೈದಿಗಳು ಹೇಳಿದ ಹಾಗೆ ಕೇಳದಿದ್ದರೆ ಸಿಬ್ಬಂದಿಗಳಿಗೆ ಬೆದರಿಕೆ ಹಾಕಲಾಗುತ್ತದೆ. ಕೈದಿಗಳನ್ನು ಇಲ್ಲಿಂದ ಬೇರೆ ಜೈಲಿಗೆ ವರ್ಗಾಯಿಸಿದರೆ ಅವರು ಕೋರ್ಟಿನಲ್ಲಿ ಅರ್ಜಿ ಹಾಕಿ ಮತ್ತೆ ಇಲ್ಲಿಗೆ ಬರುತ್ತಾರೆ. ಅದಕ್ಕೆ ತಾವೇ ಇಲ್ಲಿಂದ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಚಿಸದ ಜೈಲು ಸಿಬ್ಬಂದಿಯೋರ್ವರು ತಿಳಿಸಿದ್ದಾರೆ. ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮಕೈಗೊಂಡರೆ ಮುಂದಾಗುವ ದುರಂತವನ್ನು ತಡೆಯ ಬಹುದಾಗಿದೆ.

Write A Comment