ಉಳ್ಳಾಲ, ಅ.28: ಎತ್ತಿನಹೊಳೆ ಯೋಜನೆ, ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ನೇತ್ರಾವತಿ ಸಂರಕ್ಷಣೆಗಾಗಿ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಮಂಗಳವಾರ ತೊಕ್ಕೊಟ್ಟಿನ ನೇತ್ರಾವತಿ ಸೇತುವೆಯ ಮೇಲೆ ನಡೆಯಿತು.
ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದ ಅಂಗವಾಗಿ ತೊಕ್ಕೊಟ್ಟು ನೂತನ ಬಸ್ ತಂಗುದಾಣದಿಂದ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾವು ನೇತ್ರಾವತಿ ನದಿಯ ಸೇತುವೆಯವರೆಗೂ ಸಾಗಿ ಅಲ್ಲಿ ಮೂರು ಧರ್ಮಗಳ ಧರ್ಮಗುರುಗಳಿಂದ ಪ್ರಾರ್ಥನೆ ನೆರವೇರಿತು.
ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ನೀರಿಲ್ಲದೆ ಪೌಷ್ಟಿಕಾಂಶದ ಕೊರತೆಯಿಂದಾಗಿ ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಬಳಲುತ್ತಾರೆ. ಮುಂದೆ ಆ ಪರಿಸ್ಥಿತಿ ನಮಗೆ ಬರಬಹುದು. ರಾಜ್ಯಕೀಯ ಮುಖಂಡರಿಗೆ ಈ ಯೋಜನೆಯ ಕುರಿತು ಚಿಂತಿಸಲು ಸಮಯವಿಲ್ಲ ಎಂದು ಟೀಕಿಸಿದರು.
ತೊಕ್ಕೊಟ್ಟು ಅಲ್ ಫುರ್ಕಾನ್ ಅರೆಬಿಕ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲ ಮೌಲಾನಾ ಯಹ್ಯಾ ತಂಙಳ್ ಮದನಿ ಮಾತನಾಡಿ, ವಾಹನಗಳನ್ನು ಅಡ್ಡಗಟ್ಟಿ ರಸ್ತೆ ತಡೆಯುವ ಸಂಪ್ರದಾಯ ನಮದಲ್ಲ. ಅದರೆ ಭಯಾನಕ ವಾತಾವರಣ ನಮ್ಮ ಮುಂದೆ ಇರುವುದರಿಂದ ಈ ಕಾರ್ಯ ಅನಿರ್ವಾಯವಾಗಿದೆ. ಎಲ್ಲಾ ಧರ್ಮದವರು ಒಗ್ಗಟ್ಟಾಗಿರುವುದರಿಂದ ಹೋರಾಟ ಯಶಸ್ವಿಯಾಗುವಲ್ಲಿ ಎರಡು ಮಾತಿಲ್ಲ ಎಂದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ ದಕ್ಷಿಣ ವಲಯ ಡೀನ್ ಜಾನ್ ಬ್ಯಾಪ್ಟಿಸ್ಟ್ ಡಿಸೋಜ ಮಾತನಾಡಿ, ಪರಿಸರದ ಸಮಾನತೆ ಉಳಿಸಲು ಸಮಾನತೆಯ ಹೋರಾಟ ನಡೆದಿದೆ. ಸರಕಾರ ಯೋಜನೆಯನ್ನು ಕೈಬಿಡುವವರೆಗೂ ಹೋರಾಟ ಜೀವಂತವಾಗಿರಬೇಕಿದೆ ಎಂದರು. ಉಪಾಧ್ಯಕ್ಷೆ ರುಕ್ಸಾನ ಉಮರ್ ನಿರ್ಣಯ ವಾಚಿಸಿದರು
ನೇತ್ರಾವತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ತೊಕ್ಕೊಟ್ಟಿನ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ವಾಹನ ಚಾಲಕ ಮತ್ತು ಮಾಲಕರ ಸಂಘ, ವ್ಯಾಪಾರಸ್ಥರ ಸಂಘ, ಎಬಿಸಿ, ಎಸ್ಕೆಎಸ್ಸೆಸ್ಸೆಫ್, ಕುಂಪಲದ ಕೇಸರಿ ಮಿತ್ರಮಂಡಳಿ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್, ವಿದ್ಯಾಧರ ನಗರ ವಿದ್ಯಾ ಸಹಾಯಮಾತೆ ದೇವಾಲಯ, ರಾಣಿಪುರದ ವಿಶ್ವಮಾತೆ ದೇವಾಲಯ, ಪಾನೀರು ದಯಾಮಾತೆ ದೇವಾಲಯ, ತೌಡುಗೋಳಿಯ ಸಂತ ಲಾರೆನ್ಸ್ ಚರ್ಚ್, ಫಜೀರಿನ ದಯಾಮಾತೆ, ಸಜಿಪ ಸಂತ ಥೋಮಸ್ ಚರ್ಚ್, ಕೆಥೋಲಿಕ್ ಯುವಸಂಚಲನ, ಜಮಾಅತೆ ಇಸ್ಲಾಮಿ, ಕಾಪಿಕಾಡಿನ ಶ್ರೀಉಮಾಮಹೇಶ್ವರಿ ದೇವಸ್ಥಾನ, ಉಳ್ಳಾಲ ಶ್ರೀಭಗವತಿ ಕ್ಷೇತ್ರ, ತೊಕ್ಕೊಟ್ಟಿನ ನಾಗಕನ್ನಿಕಾ ರಕ್ತೇಶ್ವರಿ ಕ್ಷೇತ್ರ, ವಿಠೋಭ ರುಕುಮಾಯಿ ಮಂದಿರ, ಗೌರಿಗಣೇಶ ಮಹಿಳಾ ಮಂಡಳಿ, ಸಾರ್ವಜನಿಕ ಗಣೇಶೊತ್ಸವ ಸಮಿತಿ ಓವರ್ ಬ್ರಿಡ್ಜ್, ವಾಸುಕಿ ಸೇವಾ ಸಂಘ, ಉಳ್ಳಾಲ ವಿಎಚ್‌ಪಿ, ಬಜರಂಗದಳ, ಎಸ್ಸೆಸ್ಸೆಫ್, ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ಮೊದಲಾದ ಸಂಘಸಂಸ್ಥೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದವು.
ಸಂರಕ್ಷಣಾ ಸಮಿತಿ ಮತ್ತು ಗೌರವಾಧ್ಯಕ್ಷ ರೆ.ಜಾನ್ ಬ್ಯಾಪ್ಟಿಸ್ಟ್ ಸಲ್ದಾನ, ಉಪಾಧ್ಯಕ್ಷರಾದ ಫೆಲಿಕ್ಸ್ ಮೊಂತೆರೊ, ಯು.ಅಬ್ದುಲ್ ಕರೀಂ, ಷ್ಲೇವಿ ಡಿಸೋಜ, ರಾಜೀವಿ, ಜೊತೆ ಕಾರ್ಯದರ್ಶಿ ಝಾಕೀರ್ ಹುಸೈನ್, ಜೋಸೆಫ್ ಡಿಸೋಜ, ಕೋಶಾಧಿಕಾರಿ ಮೈಕಲ್ ಲೋಬೊ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ತುಳನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಕೆ.ಮುನೀರ್ ಬಾವ, ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ, ಕೆಥೊಲಿಕ್ ಸಭಾ ಕೇಂದ್ರೀಯ ನಿಯೋಜಿತ ಅಧ್ಯಕ್ಷ ವಲೇರಿಯನ್ ಡಿಸೋಜ ಪಾವೂರು, ಮಂಗಳೂರು ವಲಯಾಧ್ಯಕ್ಷ ವಿನ್ಸೆಂಟ್ ಡಿಸೋಜ ಬೋಳಿಯಾರ್, ಸಂಘಟನಾ ಕಾರ್ಯದರ್ಶಿಗಳಾದ ರೆನ್ಹೀಲ್ ಡಿಸೋಜ, ಸ್ಟ್ಯಾನ್ಲಿ ಮೊಂತೆರೊ, ದೇವದಾಸ್ ಕೊಲ್ಯ, ಯು.ಡಿ.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
