ಮಂಗಳೂರು, ಅ.28: ಭಾರತದ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಹೆಸರಿನಲ್ಲಿರುವ ಮಂಗಳೂರಿನ ಹೃದಯಭಾಗದ ಮೈದಾನದ ಒಂದು ಕಡೆ ನೆಹರೂ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ನೆಹರೂ ಪ್ರತಿಮೆ ನಿರ್ಮಾಣದ ಕುರಿತಂತೆ ಮಂಗಳವಾರ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು. ನೆಹರೂ ಅವರ 125ನೆ ಜನ್ಮ ದಿನಾಚರಣೆಯ ಆಶಯದೊಂದಿಗೆ ಮೈದಾನದ ಒಂದು ಕಡೆ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ ಇತರ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.
ಪ್ರಸಕ್ತ ನೆಹರೂ ಮೈದಾನದಲ್ಲಿರುವ ಧ್ವಜಸ್ತಂಭವನ್ನು ಕೂಡ ನವೀಕರಿಸುವಂತೆ ಸೂಚಿಸಲಾಗಿದೆ. ಶೀಘ್ರದಲ್ಲಿ ಈ ಕುರಿತ ವರದಿಯನ್ನು ಜಿಲ್ಲಾಡಳಿತದಿಂದ ಪಡೆದುಕೊಂಡು, ಯೋಜನೆ ರೂಪಿಸಲಾಗುವುದು ಎಂದವರು ತಿಳಿಸಿದರು.
ನೆಹರೂ ಪ್ರತಿಮೆ ಅನಾವರಣ ಹಾಗೂ ಧ್ವಜಸ್ತಂಭ ನವೀಕರಣದ ಜತೆಗೆ ಮೈದಾನದ ಸುವ್ಯವಸ್ಥೆಗೂ ಆದ್ಯತೆ ನೀಡಲಾಗುವುದು. ಮೈದಾನದ ನಾಲ್ಕೂ ಭಾಗದಲ್ಲಿ ಬೇಲಿ ನಿರ್ಮಾಣ ಹಾಗೂ ಸುವ್ಯವಸ್ಥಿತಗೊಳಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಅವರು ವಿವರಿಸಿದರು.
ಮೇಯರ್ ಜೆಸಿಂತ ವಿಜಯಾ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.



