ಕನ್ನಡ ವಾರ್ತೆಗಳು

ಕುದ್ರೋಳಿ ದೇವಸ್ಥಾನ : ಶಾರದಾ ವಿಗ್ರಹದ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನ

Pinterest LinkedIn Tumblr

Kudroli_Sharad_Mornig_1

ಮಂಗಳೂರು, ಅ.25: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ವೈಭವದ ಮಂಗಳೂರು ದಸರಾ-2015ರ ಮೆರವಣಿಗೆ ಇಂದು ಬೆಳಗ್ಗೆ ನವ ದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹವನ್ನು ದೇವಳದ ಆವರಣದ ಕೊಳದಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ವಿದ್ಯುಕ್ತವಾಗಿ ತೆರೆಕಂಡಿತು.

ಕುದ್ರೋಳಿಯಿಂದ ಶುಕ್ರವಾರ ಸಂಜೆ ಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹದ ಜೊತೆ ನವದುರ್ಗೆಯರ ವಿಗ್ರಹಗಳ ವರ್ಣ ರಂಜಿತ ಮೆರವಣಿಗೆ ನಗರದ ಕಂಬಲ ರಸ್ತೆಯ ಮೂಲಕ ಮಣ್ಣಗುಡ್ಡ ಮಾರ್ಗ ವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮುಂಭಾಗದಿಂದ, ವಿಶ್ವವಿದ್ಯಾನಿಲಯ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಳದ ಮುಂಭಾಗದಿಂದ ರಥಬೀದಿ, ಅಳಕೆ ಮಾರ್ಗವಾಗಿ ಮತ್ತೆ ಕುದ್ರೋಳಿ ತಲುಪಿತು.

ವರ್ಣ ರಂಜಿತ ಮೆರವಣಿಗೆ ಮರಳಿ ಕುದ್ರೋಳಿ ತಲುಪಿದಾಗ ಶನಿವಾರ ಬೆಳಗ್ಗೆ 7 ಗಂಟೆಯಾಗಿತ್ತು. ಬಳಿಕ ಶಾರದಾ ದೇವಿಯ ವಿಗ್ರಹದ ಪೂಜೆ ಹಾಗೂ ಉತ್ಸವ ಮೂರ್ತಿಗಳ ಜಳಕದ ಬಳಿಕ ಶಾರದಾ ಮಾತೆಗೆ ವಿಸರ್ಜನಾ ಉಡುಗೆ ಹಸಿರು ಸೀರೆ ತೊಡಿಸಲಾಯಿತು. 8:35ರ ಸುಮಾರಿಗೆ ಶಾರದಾ ವಿಗ್ರಹದ ವಿಸರ್ಜನೆಯೊಂದಿಗೆ ದಸರಾ ಸಮಾಪನಗೊಂಡಿತು.

Kudroli_Sharad_Mornig_2 Kudroli_Sharad_Mornig_3 Kudroli_Sharad_Mornig_4- Kudroli_Sharad_Mornig_5- Kudroli_Sharad_Mornig_6- Kudroli_Sharad_Mornig_7- Kudroli_Sharad_Mornig_8

ಈ ಬಾರಿಯ ದಸರಾ ಮೆರವಣಿಗೆಗೆ ಮಳೆ ಬಿಡುವು ನೀಡಿದ್ದರಿಂದ ನಗರದೆಲ್ಲೆಡೆ ಕಿಕ್ಕಿರಿದ ಜನಸಂದಣಿಕಂಡುಬಂದಿತ್ತು. ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ನಗರ ಉತ್ಸವಕ್ಕೆ ಮೆರುಗು ನೀಡಿತ್ತು.

ಪೌರಾಣಿಕ ಸನ್ನಿವೇಶಗಳ ಟ್ಯಾಬ್ಲೋಗಳು, ಹುಲಿ ವೇಷದ ತಂಡಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾತಂಡಗಳು, ತ್ರಿಶೂರಿನ ಬಣ್ಣದ ಕೊಡೆಗಳು, ಡೊಳ್ಳು ಕುಣಿತ, ಗೊಂಬೆ ಕುಣಿತ, ಕಣ್ಣೂರಿನ ಚೆಂಡೆವಾದನ, ಭಜನಾ ತಂಡಗಳು, ಕುದ್ರೋಳಿ ಕ್ಷೇತ್ರದ ಸಾಂಪ್ರದಾಯಿಕ ಚೆಂಡೆ ಹಾಗೂ ವಾದ್ಯ ಘೋಷಗಳೊಂದಿಗೆ ಕಲಾವಿದರು ಮೆರವಣಿಗೆಯನ್ನು ವರ್ಣರಂಜಿತವನ್ನಾಗಿಸಿದರು.

ಸನ್ಮಾನ: ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಆರಂಭಗೊಂಡ ಮೆರವಣಿಗೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಎಚ್.ಎಸ್.ಸಾಯಿರಾಮ್, ಅಖಿಲ ಭಾರತ ಬಿಲ್ಲವರ ಸಂಘದ ಅಧ್ಯಕ್ಷ ಜಯ ಸಿ. ಸುವರ್ಣ ಮೊದಲಾದವರನ್ನು ಸನ್ಮಾನಿಸಲಾಯಿತು.

Write A Comment