ಮಂಗಳೂರು,ಅ.21: ಇಡೀ ರಾಜ್ಯದಲ್ಲಿ ರೈಲು,ರಸ್ತೆ ಸಾರಿಗೆ, ಜಲಸಾರಿಗೆ, ವಾಯು ಸಾರಿಗೆಗಳನ್ನು ಹೊಂದಿ ಅತ್ಯಂತ ರಮಣೀಯ ಪ್ರವಾಸಿ ಧಾರ್ಮಿಕ ಸ್ಥಳಗಳಿರುವ ಆಕರ್ಷಕ ಸುಂದರ ಕರಾವಳಿ ತೀರವನ್ನು ಹೊಂದಿರುವ ದ.ಕ ಜಿಲ್ಲೆಯನ್ನು ಇನ್ನೂ ಹೆಚ್ಚಿನ ಪ್ರವಾಸಿ ಆಕರ್ಷಕ ಜಿಲ್ಲೆಯನ್ನಾಗಿಸಲು ಪ್ರವಾಸಿಗರಿಗೆ ಹೆಚ್ಚು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಪ್ರವಾಸಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಶೀಘ್ರವಾಗಿ ಹಮ್ಮಿಕೊಳ್ಳುವುದಾಗಿ ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಮಾತನಾಡಿದರು. ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳುವ ಬಗ್ಗೆ ಅ. 31 ರಂದು ಸಂ.4 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುವ ಜಿಲ್ಲಾ ಪ್ರವಾಸೋಧ್ಯಮ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗುವುದು. ಜಿಲ್ಲೆಯಲ್ಲಿ ಪ್ರವಾಸೋಧ್ಯಮಕ್ಕೆ ಬಂಡವಾಳ ಹೂಡಿಕೆದಾರರಿಗೆ ಪ್ರಶಸ್ತವಾದ ಕ್ಷೇತ್ರಗಳೆಂದರೆ ಹೋಟೆಲ್‌ಗಳನ್ನು ಆರಂಭಿಸುವುದು, ಕ್ರೂಸ್ ಟೂರಿಸಂ, ಮಾನೋರಂಜನೆ ಪಾರ್ಕ್‌ಗಳು, ಮಾರ್ಗಬದಿ ಸೌಲಭ್ಯಗಳು ಮುಂತಾದವುಗಳನ್ನು ಆರಂಭಿಸಲು ಹೂಡಿಕೆದಾರರು ಬಂಡವಾಳ ಹೂಡಬಹುದಾಗಿದೆ ಎಂದು ಪ್ರವಾಸೋಧ್ಯಮ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ತಿಳಿಸಿದರು.
ಸೋಮೇಶ್ವರ ಮತ್ತು ತಲಪಾಡಿ ಕಡಲ ಕಿನಾರೆ (ಬೀಚ್‌ಗಳನ್ನು) ಗಳ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ತಿಳಿಸಿದರು. ಸುರತ್ಕಲ್ ಬೀಚ್ ಅಭಿವೃದ್ಧಿಗೆ ಜಾಗ ಗುರುತಿಸಲಾಗಿದ್ದು, ಜಾಗವನ್ನು ಸಿದ್ಧಪಡಿಸಲು ಡಿ.ಸಿ ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ ನಿರ್ಮಿತಿ ಕೇಂದ್ರದ ಮುಖ್ಯಸ್ಥರಾದ ರಾಜೇಂದ್ರ ಕಲ್ಬಾವಿ ಅವರು ಮಾತನಾಡಿ ಜಿಲ್ಲೆಯ 5 ಪ್ರವಾಸಿ ತಾಣಗಳಾದ ಮಂಗಳೂರು ಬಿಕರ್ಣಕಟ್ಟೆ ಬಾಲಯೇಸು ಕ್ಷೇತ್ರ , ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ ಗ್ರಾಮದ ಬ್ಲೆಸ್ಡ್ ಜೊಸೆಫ್‌ವಾಜ್ ಚರ್ಚ್, ಮಂಗಳೂರು ತಾಲೂಕು ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ ಬಳಿಯ 20 ಕೊಠಡಿಗಳ ಯಾತ್ರೀನಿವಾಸ ನಿರ್ಮಾಣಕ್ಕಾಗಿ ರೂ.40 ಲಕ್ಷ ಸೇರಿದಂತೆರೂ. 240 ಲಕ್ಷ ಅಂದಾಜು ಪಡಿಸಲಾಗಿದ್ದು ರೂ.120 ಲಕ್ಷಗಳನ್ನು 2015-16 ನೇ ಸಾಲಿನಲ್ಲಿ ಬಿಡುಗಡೆ ಮಾಡಲು ಕಾಯ್ದಿರಿಸಿದೆ ಎಂದು ತಿಳಿಸಿದರು.
