ಕನ್ನಡ ವಾರ್ತೆಗಳು

ಅರ್ಕಾ ಸೂಕ್ಷ್ಮಾಣು ಜೀವಿ ಬಳಸಿ ತರಕಾರಿ ಬೆಳೆಸಿ .

Pinterest LinkedIn Tumblr

Arka_faday_photo

ಮಂಗಳೂರು ಅ.17: ನಮ್ಮ ಆಹಾರ ಪದಾರ್ಥಗಳಲ್ಲಿ ತರಕಾರಿಗಳ ಬಳಕೆ ಬಹು ಮುಖ್ಯ ಸ್ಧಾನ ಪಡೆದಿದೆ. ಏಕೆಂದರೆ ಅವುಗಳು ನಮ್ಮ ದೇಹಕ್ಕೆ ಬೇಕಾಗುವ ವಿಟಮಿನ್‌ಗಳನ್ನು, ಖನಿಜಾಂಶಗಳು ಮತ್ತು ಶರ್ಕರ ಪಿಷ್ಠಾದಿಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವುದಲ್ಲದೆ, ತರಕಾರಿ ಆರೋಗ್ಯ ರಕ್ಷಕ ಆಹಾರ ಎಂದು ಕರೆಯಲ್ಪಡುತ್ತವೆ.

ಅತಿಯಾದ ರಾಸಾಯನಿಕಗಳ ಬಳಕೆ ಭೂಮಿಯ ಫಲವತ್ತತೆ, ಪೋಷಕಾಂಶಗಳ ಪ್ರಮಾಣ ಹಾಗೂ ಇಳುವರಿಯ ಮೇಲೆ ಪ್ರಭಾವ ಬೀರುತ್ತದೆ. ಇಳುವರಿಯನ್ನು ಹೆಚ್ಚಿಸಲು ರಾಸಾಯನಿಕಗಳ ಸತತ ಬಳಕೆ ಕಾಲಕ್ರಮೇಣ ಕೃಷಿ ಕ್ಷೇತ್ರದ ಸ್ಥಿರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಭೂಮಿಯಲ್ಲಿ ಸಾವಯವ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ಮಣ್ಣಿನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡುವುದರೊಂದಿಗೆ ಫಲವತ್ತತೆಯನ್ನು ವೃದ್ಧಿಸಿ ಇಳುವರಿಯಲ್ಲಿ ಸ್ಥಿರತೆಯನ್ನು ಪಡೆಯಲು ರಾಸಾಯನಿಕ ಗೊಬ್ಬರದೊಂದಿಗೆ ಸಾವಯವ ಗೊಬ್ಬರ, ಎಲೆಗೊಬ್ಬರ ಹಾಗೂ ಸೂಕ್ಷ್ಮಾಣು ಜೀವಿಗಳಿಂದ ಕೂಡಿದ ಜೈವಿಕ ಗೊಬ್ಬರಗಳ ಸಮಗ್ರ ಮಿಶ್ರಣವನ್ನು ಉಪಯೊಗಿಸುವುದು ಯಾವತ್ತೂ ಲಾಭದಾಯಕವಾಗಿ ಕಂಡು ಬಂದಿದೆ. ವಿಶೇಷವಾಗಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳನ್ನು ಗುರುತಿಸಿ ಅವುಗಳ ಸೂಕ್ತ ಬಳಕೆ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಆದರೆ ಈ ಎಲ್ಲಾ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಮಾಹಿತಿ ರೈತರಿಗೆ ದೊರೆಯದಿರುವುದು ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಧೆ, ರೈತ ಸ್ನೇಹಿ ಸೂಕ್ಷ್ಮ ಜೀವಿಗಳನ್ನು ಒಗ್ಗೂಡಿಸಿ ಅರ್ಕಾ ಸೂಕ್ಷ್ಮ ಜೀವಿಗಳ ಮಿಶ್ರಣವನ್ನು ತಯಾರಿಸಿದೆ.

ಅರ್ಕಾ ಸೂಕ್ಷ್ಮ ಜೀವಿಗಳ ಮಿಶ್ರಣದಲ್ಲಿ ಸಾರಜನಕ ಸ್ಧೀರೀಕರಣ, ರಂಜಕ ಮತ್ತು ಸತುವನ್ನು ಕರಗಿಸುವ ಮತ್ತು ಗಿಡಗಳ ಬೆಳವಣಿಗೆ ಉತ್ತೇಜನ ನೀಡುವ ಸೂಕ್ಷ್ಮಜೀವಿಗಳನ್ನು ಹೊಂದಿವೆ. ಅರ್ಕಾ ಸೂಕ್ಷ್ಮ ಜೀವಿ ಮಿಶ್ರಣವನ್ನು ಗೊಬ್ಬರದೊಂದಿಗೆ, ನೀರಿನೊಂದಿಗೆ ಮತ್ತು ಬಿತ್ತನೆ ಬೀಜದೊಂದಿಗೆ ಬೆರೆಸಿ ಭೂಮಿಗೆ ಸೇರಿಸಬಹುದು. ಅರ್ಕಾ ಸೂಕ್ಷ್ಮ ಜೀವಿ ಮಿಶ್ರಣದ ಬಳಕೆಯಿಂದ ತರಕಾರಿಗಳಲ್ಲಿ ಸುಮಾರು ಶೇ. 10 ರಿಂದ 17 ರಷ್ಟು ಫಸಲು ಹೆಚ್ಚಾಗುತ್ತದೆ. ಜೊತೆಯಲ್ಲೇ ಪೋಷಕಾಂಶಗಳ ಖರ್ಚು ಶೇ.25 ರಷ್ಟು ಕಡಿಮೆಯಾಗುತ್ತದೆ.

ಬಳಕೆ ವಿಧಾನ: 
ಬೀಜೋಪಚಾರ: 10-20 ಗ್ರಾಂ. ಅರ್ಕಾ ಸೂಕ್ಷ್ಮ ಜೀವಿಗಳ ಮಿಶ್ರಣವನ್ನು 20 ಮಿ. ಲೀ. ಅನ್ನದ ಗಂಜಿಯ ಜೊತೆ ಮಿಶ್ರಣ ಮಾಡಿಕೊಳ್ಳಬೇಕು. 100 ರಿಂದ 200 ಗ್ರಾಂ. ಬಿತ್ತನೆ ಬೀಜಗಳನ್ನು ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿಕೊಳ್ಳಬೇಕು. ನಂತರ ಬೀಜಗಳನ್ನು ಸುಮಾರು 30 ನಿಮಿಷ ನೆರಳಿನಲ್ಲಿ ಒಣಗಿಸಿ 24 ಗಂಟೆಯೊಳಗೆ ಬಿತ್ತನೆ ಮಾಡಬೇಕು.

ನೀರಿನೊಂದಿಗೆ ಉಪಚರಿಸುವುದು: 20 ಗ್ರಾಂ. ಅರ್ಕಾ ಸೂಕ್ಷ್ಮ ಜೀವಿಗಳ ಮಿಶ್ರಣವನ್ನು ಒಂದು ಲೀಟರ್ ನೀರಿನೊಂದಿಗೆ ಬೆರೆಸಿಕೊಳ್ಳಬೇಕು. ಸಸಿ ನಾಟಿ ಮಾಡಿದ 10 ದಿನದ ನಂತರ ಪ್ರತೀ ಸಸಿಯ ಬುಡಕ್ಕೂ ಈ ಮಿಶ್ರಣವನ್ನು 50 ಮಿ. ಲೀ. ಹಾಕಬೇಕು. ಪರ್ಯಾಯವಾಗಿ ಈ ಮಿಶ್ರಣ ದ್ರಾವಣವನ್ನು ರಸಾವರಿಯ ಮೂಲಕವೂ ಕೊಡಬಹುದು. ಈ ಸಂದರ್ಭದಲ್ಲಿ ಮಿಶ್ರಣ ದ್ರಾವಣವನ್ನು ಮಸ್ಲಿನ್ ಬಟ್ಟೆಯಲ್ಲಿ ಸೋಸಿ ಉಪಯೋಗಿಸಬೇಕು.

ಕೊಟ್ಟಿಗೆ ಗೊಬ್ಬರದೊಂದಿಗೆ ಉಪಚರಿಸುವುದು: ಒಂದು ಎಕರೆ ಜಮೀನನ್ನು ಉಪಚರಿಸಲು 500 ಕೆಜಿ. ಕೊಟ್ಟಿಗೆ ಗೊಬ್ಬರಕ್ಕೆ 5 ಕೆಜಿ. ಅರ್ಕಾ ಸೂಕ್ಷ್ಮ ಜೀವಿಗಳ ಮಿಶ್ರಣವನ್ನು ಸೇರಿಸಿ ನಂತರ ಅದನ್ನು ಸಸಿಗಳ ಬುಡಕ್ಕೆ ಹಾಕಬೇಕು. ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗೆ ಇಲ್ಲವೆ ನಾಟಿ ಮಾಡಲು ತಯಾರಿಸುವಾಗ ಈ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಿಯೂ ಉಪಯೋಗಿಸಬಹುದು.

ಈ ಮಾಹಿತಿಯನ್ನು ತೋಟಗಾರಿಕೆ ಮಾಹಿತಿ ಹಾಗೂ ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಪ್ರಕಟಣೆ ತಿಳಿಸಿದೆ, ಹೆಚ್ಚಿನ ಮಾಹಿತಿಗಾಗಿ ಹಾಗೂ ಖರೀದಿ ಮಾಡಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಧೆ, ಹೆಸರಘಟ್ಟ ಬೆಂಗಳೂರು ರವರನ್ನು ಸಂಪರ್ಕಿಸಲು ತಳಿಸಿದೆ ದೂರವಾಣಿ- 080-28466420/ 21/22.

Write A Comment