ಉಡುಪಿ: ಉಡುಪಿ ನಗರವನ್ನೇ ಬೆಚ್ಚಿಬೀಳಿಸಿದ್ದ ಮಣಿಪಾಲ ವೆದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಕಾಮುಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿ ಉಡುಪಿ ಘನ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಅತ್ಯಾಚಾರ ನಡೆಸಿದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ ಪ್ರಮುಖ ಆರೋಪಿಗಳಾಗಿದ್ದ ಯೋಗೇಶ್, ಆನಂದ್ ಮತ್ತು ಹರಿಪ್ರಸಾದ್ ಅವರಿಗೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 1.10 ಲಕ್ಷ ರೂಪಾಯಿಗಳ ದಂಡವನ್ನು ನೀಡುವಂತೆ ತೀರ್ಪನ್ನು ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪದಡಿಯಲ್ಲಿ ಬಂಧಿತರಾದ ಬಾಲಚಂದ್ರ ಮತ್ತು ಹರೀಂದ್ರ ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಘಟನೆ ಹಿನ್ನೆಲೆ: 2013ರ ಜೂನ್ 20ರಂದು ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಲಾಗಿತ್ತು. ಈ ಪ್ರಕರಣವನ್ನು ಘಟನೆ ನಡೆದು ಒಂದು ವಾರದೊಳಗೆ ಬೇಧಿಸುವಲ್ಲಿ ಸಫಲರಾಗಿದ್ದ ಮಣಿಪಾಲ ಪೊಲೀಸರು ಪ್ರಧಾನ ಆರೋಪಿಗಳನ್ನು ಬಂಧಿಸಿದ್ದರು. ಮತ್ತು ಘಟನೆಗೆ ಸಂಬಂಧಿಸಿ ಹಲವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಅಲ್ಲದೇ 62 ಮುಖ್ಯ ಸಾಕ್ಷಿಗಳ ವಿಚಾರಣೆಯೂ ನಡೆದಿತ್ತು. ಘಟನೆ ನಡೆದ ಎರಡೂವರೆ ವರ್ಷಗಳ ಒಳಗೆ ಈ ತೀರ್ಪು ಹೊರಬಂದಿರುವುದು ವಿಶೇಷವಾಗಿದ್ದು ಇದು ತಪ್ಪಿತಸ್ಥರಿಗೆ ಸಿಕ್ಕ ಸ್ಹಾಸ್ತಿಯಾಗಿದೆ. ಅಲ್ಲದೇ ಇಂತಹ ಚಟುವಟಿಕೆ ನಡೆಸುವವರಿಗೆ ಪಾಠವಾಗಿದೆ ಎಂದು ಸರಕಾರಿ ಅಭಿಯೋಜಕ ಟಿ.ಎಸ್. ಜಿತ್ತೂರಿ ಅವರು ಹೇಳಿದ್ದಾರೆ.
