ಮಂಗಳೂರು, ಅ.15: ವಿವಾದಾತ್ಮಕ ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ದ.ಕ. ಜಿಲ್ಲಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದು, ಜೀವನದಿ ನೇತ್ರಾವತಿ ಉಳಿಸಿಕೊಳ್ಳುವ ಹೋರಾಟದ ಮುಂಚೂಣಿಯಲ್ಲಿರುವ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಪಂಪ್‌ವೆಲ್ ವೃತ್ತದ ಬಳಿ ರಸ್ತೆ ತಡೆ ಚಳವಳಿ ನಡೆಯಿತು.
ಎತ್ತಿನಹೊಳೆ ಯೋಜನೆ ವಿರುದ್ಧ ಇಂದು ಬೆಳಗ್ಗೆ 10 ಗಂಟೆಗೆ ಪಂಪ್ ವೆಲ್ ವೃತ್ತದಲ್ಲಿ ನಾಲ್ಕೂ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ದ.ಕ. ಜಿಲ್ಲೆಯ ಜನರ ಕೂಗನ್ನು ಸರಕಾರಕ್ಕೆ ತಲುಪಿಸುವ ಹಿನ್ನೆಲೆಯಲ್ಲಿ ಕರಾವಳಿಯ ಎತ್ತಿನಹೊಳೆ ಯೋಜನೆ ವಿರೋಧಿ ಸಂಘಟನೆಗಳು ಹಮ್ಮಿಕೊಂಡಿರುವ ಈ ರಸ್ತೆ ತಡೆ ಚಳವಳಿಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಮುಖಂಡ ದಿನೇಶ್ ಹೊಳ್ಳ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆ ವಿರೋಧಿಸುವ ವಿವಿಧ ಸಂಘಟನೆಗಳು ಇದೀಗ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಮೂಲಕ ಒಂದಾಗಿ ಹೋರಾಟಕ್ಕೆ ಧುಮುಕಿದ್ದು, ಇದರ ಭಾಗವಾಗಿ ಈ ಚಳವಳಿ ಸಂಘಟಿಸಲಾಗಿದೆ ಎಂದರು.
ಈ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಮತ್ತೊಮ್ಮೆ ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದು, ವಿವಾದಾತ್ಮಕ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ರೀತಿಯ ಹೋರಾಟಗಳನ್ನು ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಒಕ್ಕೂಟದ ಸಂಚಾಲಕ ಡಾ. ನಿರಂಜನ್ ರೈ ಮಾತನಾಡಿ, ಯೋಜನೆ ವಿರೋಧಿಸಿ ಹಲವು ಹೋರಾಟಗಳು ನಡೆದಿವೆ. ಇದು ಸರ್ಕಾರದ ಮೇಲೆ ಪ್ರಭಾವವನ್ನೂ ಬೀರಿವೆ. ಅವೈಜ್ಞಾನಿಕವಾದ ಈ ಯೋಜನೆಯನ್ನು ಕೈ ಬಿಡುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಯೋಜನೆ ಸ್ಥಗಿತಗೊಳ್ಳುವ ತನಕ ಹೋರಾಟ ಮುಂದುವರಿಯಲಿದೆ ಎಂದರು. ಸರ್ಕಾರವು ಡಿಪಿಆರ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಜನತೆಯ ಮುಂದಿಟ್ಟು ಸಂಶಯ ನಿವಾರಿಸುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಓಡಿಯೂರ್ ಸ್ವಾಮೀಜಿ, ಕೇಮಾರ್ ಮಠದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಎಮ್.ಎಲ್.ಸಿ ಕ್ಯಾ.ಗಣೇಶ್ ಕಾರ್ನಿಕ್, ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ಶೆಟ್ಟಿ, ಸುರತ್ಕಲ್, ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಮೀನುಗಾರರ ಮುಖಂಡ ರಾಮಚಂದ್ರ ಬೈಕಂಪಾಡಿ, ಕರಾವಳಿ ಕಾಲೇಜು ಸಮೂಹದ ಸ್ಥಾಪಾಕಧ್ಯಕ್ಷ ಎಸ್.ಗಣೇಶ್ ರಾವ್, ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್, ವಿಎಚ್‌ಪಿ ಮುಖಂಡ ಜಗದೀಶ್ ಶೇಣವ, ವಿವಿಧ ಘಟಕಗಳ ಮುಖಂಡರಾದ ಎಂ.ಜಿ.ಹೆಗ್ಡೆ, ಶಶಿರಾಜ್ ಕೊಳಂಬೆ, ಅಶ್ರಫ್ ಮತ್ತಿತ್ತರ ಹಲವಾರು ಸಂಘಟನೆಗಳು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎತ್ತಿನಹೊಳೆ ಯೋಜನೆಯ ವಿರುದ್ಧ ಹಮ್ಮಿಕೊಂಡ ಈ ರಸ್ತೆ ತಡೆ ಚಳುವಳಿಗೆ ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, ಪುತ್ತೂರಿನ ಜನಸಾಮಾನ್ಯರ ಹಿತರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕ ದ.ಕ. ಜಿಲ್ಲಾ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕ್, ಬಂಟರ ಯಾನೆ ನಾಡವರ ಮಾತ್ರ ಸಂಘದ ಯುವ ಘಟಕ, ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.























