ಮಂಗಳೂರು,ಅ.12 : ಸಾವಯವ ಸ್ವಾವಲಂಬಿ ಸಂತೆ ಮತ್ತು ಸಾವಯವ ನೈಸರ್ಗಿಕ ಸಿರಿಧಾನ್ಯ ಆಹಾರೋತ್ಸವ ಉಜ್ಜೋಡಿ ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಆವರಣದಲ್ಲಿ ಭಾನುವಾರ ನಡೆಯಿತು.
ವಿವಿಧ ಬಗೆಯ ಸಾವಯವ ತರಕಾರಿಗಳು, ಹಣ್ಣು, ಪಾರಂಪರಿಕ ತಯಾರಿಯ ಪಾನೀಯಗಳು, ಸಾವಯವ ಧಾನ್ಯ, ಜೇನುತುಪ್ಪ , ಗೃಹೋಪಯೋಗಿ ವಸ್ತುಗಳು, ಸಿಹಿತಿನಿಸುಗಳು, ಕರಕುಶಲ ವಸ್ತುಗಳು, ಖಾದಿ ವಸ್ತ್ರಗಳು, ಆಯುರ್ವೇದ ಗಿಡಮೂಲಿಕೆಯ ಔಷಧಿಗಳು, ಮನೆಯಲ್ಲಿ ತಯಾರಿಸಿದ ವಸ್ತುಗಳು, 10 ಕ್ಕೂ ಅಧಿಕ ಬಗೆಯ ಸಾವಯವ ಸಿರಿಧಾನ್ಯಗಳ ಆಹಾರ ಉತ್ಪನ್ನಗಳಿದ್ದವು. ದೇಸಿ ಉತ್ಥಾನ ಅಸೋಸಿಯೇಟ್ಸ್ ಮಂಗಳೂರು ಹಾಗೂ ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಮತ್ತು ಸಾವಯವ ಕೃಷಿಕ ಗ್ರಾಹಕರ ಬಳಗಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿಕ ಹಾಗೂ ಅಂಕಣಕಾರ ಪಡಾರು ರಾಮಕೃಷ್ಣಶಾಸ್ತ್ರಿ, ಸಾವಯವ ಎನ್ನುವುದು ಕೇವಲ ನಾಲಿಗೆಯ ಮಾತಾಗ ಬಾರದು. ಸಾವಯವ ಕುರಿತು ಮಾನದಂಡ ಇರಬೇಕು. ಕೃಷಿಕ ಹಾಗೂ ಮಧ್ಯವರ್ತಿಗಳಿಗೆ ಈ ಕುರಿತು ಹೆಚ್ಚಿನ ಬದ್ಧತೆ ಮೂಡಿಸಬೇಕು. ಆಹಾರವಸ್ತು ಉತ್ಪಾದನೆಯಲ್ಲಿ ಪರಾವಲಂಭಿಗಳಾಗುವುದನ್ನು ತಪ್ಪಿಸಬೇಕು ಎಂದು ನುಡಿದರು.
ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ್ ಮಾತನಾಡಿ, ನಗರದಲ್ಲಿ ಸಾವಯವ ಕೃಷಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಸಾವಯವ ಕೃಷಿ ಹಾಗೂ ಸ್ವಾವಲಂಭಿ ಸಂತೆಯಲ್ಲಿ ಪಾಲ್ಗೊಳ್ಳುವವರು ಆರ್ಥಿಕವಾಗಿ ಸಬಲರಾಗಿದ್ದಾರೆ. ನಗರದಲ್ಲಿ 50 ಮಂದಿಯ ಸ್ವಾವಲಂಬಿ ಸಂತೆ ನಡೆಯುತ್ತಿದೆ . 3500 ಮಂದಿಯಿಂದ ಜನಾಭಿಪ್ರಾಯ ಮೂಡಿಬಂದಿದೆ. ಸಾವಯವ ಸಂತೆಯಲ್ಲಿ ಪಾಲ್ಗೊಳ್ಳುವವರು ನಮ್ಮ ನಿರೀಕ್ಷೆಗೆ ತಕ್ಕಂತೆ ಸಾವಯವ ವಸ್ತು ಪೂರೈಸದಿದ್ದರೆ ಅವರನ್ನು ಪಾಲ್ಗೊಳ್ಳದಂತೆ ಸೂಚನೆ ನೀಡಿ ಕಳುಹಿಸಿದ್ದೇವೆ. ಸಾವಯವ ಗುಣಮಟ್ಟಕ್ಕೆ ಒತ್ತು ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆ ವಹಿಸಿದ್ದರು.ಸೂರಜ್ ಪ್ರಾರ್ಥಿಸಿದರು. ರಾಮಕೃಷ್ಣ ಭಟ್ ನಿರೂಪಿಸಿ, ವಂದಿಸಿದರು.





