ಮಂಗಳೂರು, ಅ. 09: ನಗರ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಲೇರಿಯಾ ನಿಯಂತ್ರಣ ಕ್ರಿಯಾ ಸಮಿತಿಯು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ತಯಾರಿಸಿರುವ ನೂತನ ಸಾಫ್ಟ್ವೇರ್ (ತಂತ್ರಾಂಶ)ಗೆ ಅ.17ರಂದು ಚಾಲನೆ ದೊರೆಯಲಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ತಿಳಿಸಿದ್ದಾರೆ.
ಮನಪಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಈ ತಂತ್ರಾಂಶಕ್ಕೆ ಚಾಲನೆ ನೀಡಲಾಗುವುದು. ಮಲೇರಿಯಾ ನಿಯಂತ್ರಣಕ್ಕೆ ಪೂರ್ಣ ಪ್ರಮಾಣದಲ್ಲಿ (ವೈದ್ಯರ ವರದಿಯಿಂದ ಹಿಡಿದು ರೋಗ ಗುಣವಾಗುವವರೆಗೆ) ತಂತ್ರಾಂಶವನ್ನು ಬಳಸಿರುವ ದೇಶದ ಪ್ರಥಮ ಯೋಜನೆ ಇದಾಗಿದೆ ಎಂದು ಅವರು ಹೇಳಿದರು.
ಈ ಸಾಫ್ಟ್ವೇರ್ ಮೂಲಕ ಮಲೇರಿಯಾ ಪ್ರಕರಣಗಳನ್ನು ಜಿಪಿಎಸ್ ವ್ಯವಸ್ಥೆಗೆ ಬಳಸಿ ನಕ್ಷೆ ತಯಾರಿಸಬಹುದು ಹಾಗೂ ಮಲೇರಿಯಾ ಪ್ರಕರಣಗಳ ದಟ್ಟಣೆ ಗುರುತಿಸಿ ನಿಯಂತ್ರಣಕ್ಕೆ ಸಾಧ್ಯವಾಗಲಿದೆ ಎಂದು ಸಾಫ್ಟ್ ವೇರ್ನ ಉಪಯೋಗಗಳ ಬಗ್ಗೆ ವಿವರಿಸಿದ ಕ್ರಿಯಾ ಸಮಿತಿಯ ನರೇನ್ ಕೊಡುವಟ್ ವಿವರಿಸಿದರು.
ಸಾಫ್ಟ್ವೇರ್ ತಯಾರಿಸಲು ಕರ್ಣಾಟಕ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಐ ಪಾಯಿಂಟ್, ಕೋಡ್ ಕ್ರಾಫ್ಟ್ಗಳು ಮನಪಾ ಜತೆ ಸಹಕರಿಸಿವೆ ಎಂದು ಮೇಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೇಶವ್, ಪ್ರಕಾಶ್ ಸಾಲ್ಯಾನ್, ದೀಪಕ್ ಪೂಜಾರಿ, ಮನಪಾ ಉಪಆಯುಕ್ತ ಗೋಕುಲ್ದಾಸ್ ನಾಯಕ್, ಡಾ.ಕೆ.ಆರ್. ಶೆಟ್ಟಿ, ದೀಕ್ಷಿತ್, ಕರ್ಣಾಟಕ ಬ್ಯಾಂಕ್ನ ಶ್ರೀನಿವಾಸ ದೇಶಪಾಂಡೆ ಉಪಸ್ಥಿತರಿದ್ದರು.





