ಮಂಗಳೂರು, ಅ.09: ಕೋಬ್ರಾ ಪೋಸ್ಟ್ ಮತ್ತು ಗುಲೈಲ್ ಸಂಸ್ಥೆಗಳ ಪ್ರತಿನಿಧಿಗಳು ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಮಾಜಿ ಮುಖಂಡ ಶ್ರೀಕರ ಪ್ರಭು ಹಾಗೂ ದೇಶಾದ್ಯಂತ ಇನ್ನಿತರ ಸಂಘ ಪರಿವಾರದ ನಾಯಕರನ್ನು ಭೇಟಿ ಮಾಡಿ ಅವರ ರಹಸ್ಯ ಕಾರ್ಯಸೂಚಿಯನ್ನು ಬಹಿರಂಗಗೊಳಿಸಿದ್ದು, ಇದರ ಸತ್ಯಾಂಶದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಹಾಗೂ ಸಂಘ ಪರಿವಾರದ ರಹಸ್ಯ ಕಾರ್ಯಸೂಚಿಯನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ವಿವಿಧ ಪತ್ರಿಕೆಗಳು, ದೃಶ್ಯ ಮಾಧ್ಯಮದಲ್ಲಿ ಸುದ್ದಿ ಬಿತ್ತರಗೊಂಡಿದ್ದು, ಇಂತಹ ಆತಂಕವಾದಿ ರಹಸ್ಯ ಕಾರ್ಯಸೂಚಿಯನ್ನು ಹೊಂದಿರುವ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಮೊಹಮ್ಮದ್ ಹನೀಫ್, ಅಶ್ರಫ್, ಮುಸ್ತಾಫ, ಎಂ.ಡಿ.ಅಸ್ಲಂ, ಅಬೂಬಕ್ಕರ್ ಉಪಸ್ಥಿತರಿದ್ದರು.










